Saturday 30 June, 2007

ನಗೆಗಡಲಲ್ಲಿ ತೇಲಾಡಿಸುವ "ಸತ್ಯವಾನ್ ಸಾವಿತ್ರಿ" !

ರಮೇಶ್ ಅರವಿಂದ್ ನಿರ್ದೇಶನದ ಎರಡನೇ ಪ್ರಯತ್ನವಾದ "ಸತ್ಯವಾನ್ ಸಾವಿತ್ರಿ" ಹಾಸ್ಯದ ಹೊನಲನ್ನೇ ಹರಿಸುತ್ತದೆ. ೧೯೬೯ ರಲ್ಲಿ ತೆರೆಕಂಡ "ಕ್ಯಾಕ್ಟಸ್ ಫ್ಲವರ್" ಎಂಬ ಹಾಲಿವುಡ್ ಚಿತ್ರದ ಕಥೆಯಿಂದ ಪ್ರೇರಿತವಾದ ಈ ಚಿತ್ರಕ್ಕೆ ರಮೇಶ್ ತಮ್ಮದೇ ಆದ ಶೈಲಿಯಲ್ಲಿ ನವಿರಾದ, ಹಾಸ್ಯ ಭರಿತವಾದ ಚಿತ್ರಕಥೆಯನ್ನು ಬರೆದು ನಿರ್ದೇಶಿಸಿದ್ದಾರೆ. ಆರಂಭದ ದೃಶ್ಯದಿಂದ ಹಿಡಿದು ಕೊನೆಯ ದೃಶ್ಯದವರೆಗೂ ಹಾಸ್ಯವೇ ತುಂಬಿ ತುಳುಕತ್ತಿದೆ. ನಿರೂಪಣೆಯಲ್ಲಿ ಎಲ್ಲಿಯೂ ಸೋಲದ ರಮೇಶ್ ಚಿತ್ರವನ್ನು ಒಂದು ಅದ್ಭುತ ಹಾಸ್ಯ ಚಿತ್ರವನ್ನಾಗಿಸಿದ್ದಾರೆ. ಅವರ ಈ ಶ್ರಮಕ್ಕೆ HATS OFF

ಇದು ಅವಿವಾಹಿತ ದಂತವೈದ್ಯ ಡಾ. ಸತ್ಯವಾನನ (ರಮೇಶ್) ಕಥೆ. ಸುಂದರವಾದ ಹೆಣ್ಣು ಮಕ್ಕಳನ್ನು ಮೋಡಿಮಾಡಿ ತನ್ನ ಬಲೆಗೆ ಹಾಕಿಕೊಂಡು ಅವರೊಡನೆ ಕೆಲವು ದಿನಗಳ ಕಾಲ ಸುತ್ತಾಡಿ, ಮೋಜು ಮಾಡಿ, ಮುಂದೊಂದು ದಿನ ಅವರ ಸಂಗ ಬೇಸರ ತಂದಕೂಡಲೇ ಜುಬ್ಬಾ ಧರಿಸಿ, ಅತ್ಯಂತ ವಿಧೇಯತೆಯಿಂದ "ನನಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿವೆ, ಕ್ಷಮಿಸಿ" ಎಂದು ಸುಳ್ಳು ಹೇಳಿ ಅವರಿಂದ ಮುಕ್ತಿ ಪಡೆಯುವುದೇ ಈ ಸ್ತ್ರೀ-ಲೋಲ ದಂತ ವೈದ್ಯನ ಕಾಯಕ. ಹೀಗೆ ಬೇಡದ ಹೆಣ್ಣುಮಕ್ಕಳಿಂದ ಬಿಡುಗಡೆ ಪಡೆಯುವ ಕಾಯಕಕ್ಕೆ "ಆಪರೇಷನ್ ಜುಬ್ಬಾ" ಎಂಬ ಹೆಸರು ಬೇರೆ!!!. ಮದುವೆಯೆಂಬ ಬಂಧನದಲ್ಲಿ ಸಿಲುಕಲೊಪ್ಪದೇ ಹುಡುಗಿಯರೊಂದಿಗೆ ಒಂದಷ್ಟು ದಿನ ಅಡ್ಡಾಡಿಕೊಂಡು ಆಕೆ ಬೇಜಾರಾದಾಗ ಇನ್ನೊಬ್ಬಳ ಕಡೆ ಗಮನ ಹರಿಸುವ ಸತ್ಯವಾನನ ಬಲೆಗೆ ಬೀಳುವ ಮತ್ತೊಬ್ಬ ಹುಡುಗಿಯೇ ಮೋನಿಷಾ (ಜನ್ನಿಫರ್ ಕೋತ್ವಾಲ್). ಸರಿ, ಮಾಮೂಲಿನಂತೆ ಈಕೆಯೊಡನೆಯೂ ಸುತ್ತಾಡಿ "ಯಾಕೋ ಜುಂ ಜುಂ ಅಂತೈತೆ ನನ್ ಮೈಯ್ಯಲ್ಲಿ..." ಅಂತೆಲ್ಲ ಹಾಡಿ ಕುಣಿದು ಕುಪ್ಪಳಿಸಿದ ಮೇಲೆ "ಆಪರೇಷನ್ ಜುಬ್ಬಾ"ದ ಮೂಲಕ ಈಕೆಯಿಂದ ಕಳಚಿಕೊಳ್ಳಲು ಯತ್ನಿಸುತ್ತಾನೆ ಡಾ ಸತ್ಯ. ಆದರೆ ಮೋಸವಾಗುವುದೇ ಇಲ್ಲಿ... ಮದುವೆಯಾಗಿ ಮಕ್ಕಳಿದೆ ಎಂದು ಪ್ರಾಮಾಣಿಕವಾಗಿ ಹೇಳಿರುವ ನಿನ್ನ ನಿಷ್ಠೆ ನನಗೆ ತುಂಬಾ ಇಷ್ಟವಾಯ್ತು.. ನೀನೇ ನನಗೆ ಸರಿಯಾದ ಜೋಡಿ ಎಂದು ಬಿಡುತ್ತಾಳೆ ಈ ಬಾಲೆ!!!. ಈಕೆಯಿಂದ ಬಚಾವಾಗಲು ಸುಳ್ಳುಗಳ ಮೇಲೆ ಸುಳ್ಳು ಹೇಳಬೇಕಾಗುತ್ತದೆ. ಮದುವೆಯಾಗದಿದ್ದರೆ ಆಸ್ತಿಯನ್ನೆಲ್ಲ ನಾಯಿ ಕಲ್ಯಾಣ ಸಂಘಕ್ಕೆ ಬರೆಯುವುದಾಗಿ ತಾತ (ದತ್ತಣ್ಣ) ಹೆದರಿಸಿದಾಗ ಮೋನಿಷಾಳನ್ನೇ ಮದುವೆಯಾಗುವ ತೀರ್ಮಾನಕ್ಕೆ ಬರುತ್ತಾನೆ ಡಾ. ಸತ್ಯ. ಆದರೆ ಮೋನಿಷಾ ನಿನ್ನ ಪತ್ನಿಗೆ ನಾನು ಮೋಸ ಮಾಡಲಾರೆ, ಅವಳೊಪ್ಪುವುದಾದರೆ ಮಾತ್ರ ನಿನ್ನ ಜೊತೆ ಮದುವೆ... ಅವಳನ್ನು ಒಮ್ಮೆ ಮಾತಾಡಿಸಬೇಕು.. ತೋರಿಸು ಎಂದು ಹಠ ಹಿಡಿದಾಗ ತನ್ನ ಕ್ಲಿನಿಕ್ ನ ನರ್ಸ್ ಸುಬ್ಬಲಕ್ಷ್ಮಿ ಯಲ್ಲಿ (ಡೈಸಿ ಬೋಪಣ್ಣ) ತನ್ನ ಹೆಂಡತಿ "ಸಾವಿತ್ರಿ" ಯಾಗಿ ನಟಿಸುವಂತೆ ಕೇಳಿಕೊಳ್ಳುತ್ತಾನೆ. ಡಾ.ಸತ್ಯವಾನನ್ನು ಮಾನಸಿಕವಾಗಿ ಪ್ರೀತಿಸುವ ಸುಬ್ಬಲಕ್ಷ್ಮಿ ಇದಕ್ಕೆ ಒಪ್ಪುತ್ತಾಳೆ. ಮುಂದೇನಾಗುತ್ತದೆ?? ಕೊನೆಗೆ ಸತ್ಯವಾನನ ಸಾವಿತ್ರಿಯಾಗುವುದು ಯಾರು, ಈ ಎಲ್ಲ ಸಮಸ್ಯೆಗಳ ಸುಳಿಯಿಂದ ಡಾಕ್ಟರ್ ಹೇಗೆ ತಪ್ಪಿಸಿಕೊಳ್ಳುತ್ತಾನೆಂಬುದನ್ನು ರಮೇಶ್ ಅತ್ಯಂತ ದಕ್ಷವಾಗಿ, ಹೊಟ್ಟೆ ಹುಣ್ಣಾಗುವಂತೆ ನಗಿಸುವುದರ ಮೂಲಕ ತೆರೆಯ ಮೇಲೆ ತೋರಿಸಿದ್ದಾರೆ... ಒಂದು ಸುಳ್ಳನ್ನು ಮುಚ್ಚಿಡಲು ಸುಳ್ಳುಗಳ ಸರಮಾಲೆಯನ್ನೇ ಹರಿಸುವ ಸತ್ಯನ ಪಾಡನ್ನು ನೋಡಲು ಎರಡು ಕಣ್ಣುಗಳು ಸಾಲದು. ನೋಡಿ ಆನಂದಿಸಿ.


ಸತ್ಯವಾನನಾಗಿ ರಮೇಶ್‍ಗೆ ಫುಲ್ ಮಾರ್ಕ್ಸ್. . ಜೆನ್ನಿಫರ್ ಅಭಿನಯ ಓಕೆ. ಆದರೆ ಎಲ್ಲರ ಮೆಚ್ಚುಗೆಗೆ ಪಾತ್ರಳಾಗುವುದು ಕೊಡಗಿನ ಬೆಡಗಿ, ಕನ್ನಡತಿ ಡೈಸಿ ಬೋಪಣ್ಣ. ನರ್ಸ್ ಸುಬ್ಬಮ್ಮನ ಪಾತ್ರಕ್ಕೆ ಜೀವ ತುಂಬುವಂತೆ ಡೈಸಿ ಅಭಿನಯಿಸಿದ್ದಾಳೆ. ಉಳಿದಂತೆ ಮೋನಿಷಾಳ ಪ್ರೇಮಿಯಾಗಿ ಅನಿರುದ್ಧ, ಗೆಳೆಯನಾಗಿ ಮೋಹನ್, ದಂತ ಚಿಕಿತ್ಸೆಗಾಗಿ ಬರುವ ಶೆಟ್ಟರು (ಸುಂದರ್ ರಾಜ್) ಮತ್ತು ಪುಕ್ಕಲ ಗೌಡ (ಕೋಮಲ್ ಕುಮಾರ್) ನಗುವಿನ ಓಟಕ್ಕೆ ಮತ್ತಷ್ಟು ವೇಗವನ್ನು ಕೊಡುತ್ತಾರೆ. ಗುರುಕಿರಣ್ ಸಂಗೀತದಲ್ಲಿ ಮೂರು ಹಾಡುಗಳು ಸುಂದರವಾಗಿ ಮೂಡಿ ಬಂದಿವೆ. ಅದರಲ್ಲೂ "ಫಸ್ಟ್ ಟೈಮ್ ನಿನ್ನ ನೋಡಿದಾಗ.." ಹಾಡಂತೂ ಅತ್ಯಂತ ಸುಂದರವಾಗಿ ಚಿತ್ರಿತವಾಗಿದ್ದು ಕಣ್ಣು ಕಿವಿಗಳೆರಡಕ್ಕೂ ಮಹದಾನಂದವನ್ನುಂಟುಮಾಡುತ್ತದೆ. ಪಿ.ಕೆ.ದಾಸ್ ಛಾಯಾಗ್ರಹಣದಲ್ಲಿ ಮಿಂಚಿದ್ದಾರೆ.


ಕನ್ನಡದಲ್ಲಿ ಒಳ್ಳೊಳ್ಳೆಯ ಚಿತ್ರಗಳು ಬರುತ್ತಿರುವ ಈ ಶುಭ ಸಂದರ್ಭದಲ್ಲಿ "ಸತ್ಯವಾನ್ ಸಾವಿತ್ರಿ"ಯ ಆಗಮನ ಮತ್ತಷ್ಟು ಸಂತಸವನ್ನು ತರುತ್ತದೆ. ರಮೇಶ್ ಕನ್ನಡಕ್ಕೆ ನಿಜವಾಗಲೂ ಒಂದು ಕೊಡುಗೆ. ರಾಮಾ ಶ್ಯಾಮಾ ಭಾಮದ ನಂತರ ಹೆಚ್ಚಾಗಿದ್ದ ಜವಾಬ್ದಾರಿಯನ್ನು "ಸತ್ಯವಾನ್ ಸಾವಿತ್ರಿ"ಯ ಮೂಲಕ ಸಮರ್ಥವಾಗಿ ನಿಭಾಯಿಸಿದ್ದಾರೆ. .

ಇನ್ನೇಕೆ ತಡ... ಹೋಗಿ, ಮನೆ ಮಂದಿಯೆಲ್ಲ ಕುಳಿತು "ಸತ್ಯವಾನ್ ಸಾವಿತ್ರಿ"ಯನ್ನು ನೋಡಿ ನಕ್ಕು ನಲಿದು ಬನ್ನಿ. ನಗೆಗಡಲಲ್ಲಿ ತೇಲಾಡಿ.

ನನ್ನ ಅಂಕ - 9/10

Wednesday 27 June, 2007

ಆರ್ಕುಟ್" ಎಂಬ ಮಾಯಾ ಜಾಲ!

ಹೇಯ್, ನಿಂಗೆ ಸ್ಕ್ರ್ಯಾಪ್ ಮಾಡ್ತೀನಿ.. ", "ನನ್ನ ಸ್ಕ್ರ್ಯಾಪ್ ಬುಕ್ ನೋಡು".. "ನಿನ್ನ ಹೊಸ ಟೆಸ್ಟಿಮೊನಿ ಸಖತ್ತಾಗಿದೆ.. ಯಾರೋ ಅವನು ಬರೆದಿದ್ದು?", "ಅಲ್ಬಮ್ ಅಪ್‍ಡೇಟ್ ಮಾಡೋ", "ನನ್ನನ್ನ ಫ್ರೆಂಡ್ ಲಿಸ್ಟ್ ಗೆ ಸೇರಿಸ್ಕೋ".. ಏನಿದು ವಿಚಿತ್ರವಾಗಿದೆ ಅಂತೀರಾ? ಇದು ಆರ್ಕುಟ್ ಎಂಬ ಅಂತರ್ಜಾಲದ ನೂತನ ತಾಣ ಸೃಷ್ಟಿಸಿರೋ ಹೊಸ ಪದಗಳು... ಯುವ ಜನಾಂಗವನ್ನು ಗಾಢವಾಗಿ ತನ್ನತ್ತ ಸೆಳೆದಿರುವ ಮಾಹಿತಿ ತಂತ್ರಜ್ಞಾನದ ನೂತನ ಆವಿಷ್ಕಾರ.

ಏನಿದು ಆರ್ಕುಟ್ ?

ಆರ್ಕುಟ್ ಎಂಬುದು ಪರಸ್ಪರ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು, ವಿಷಯಗಳ ಬಗ್ಗೆ ಮತ್ತು ಚರ್ಚಿಸಲು, ಭೌಗೋಳಿಕವಾಗಿ ದೂರ ದೂರವಿರುವ ಸ್ನೇಹಿತರ ನಡುವೆ ಸಂಪರ್ಕ ಸೇತುವೆಯನ್ನು ನಿರ್ಮಿಸಲು ಅನುಕೂಲವನ್ನು ಕಲ್ಪಿಸುವ ಅಂತರ್ಜಾಲದ ಒಂದು ತಾಣ. (http://www.orkut.com).

ಹೊಸ ಸ್ನೇಹಿತರು ಬೇಕೇ? ಇಲ್ಲಿ ಸುಲಭವಾಗಿ ಸಂಪಾದಿಸಿ ಅವರೊಡನೆ ಹರಟ ಬಹುದು. ಆರ್ಕುಟ್‍ನ ಸ್ಕ್ರ್ಯಾಪ್ ಬುಕ್‍ಗಳಿರುವುದೇ ಸ್ನೇಹಿತರ ನಡುವಣ ದೈನಂದಿನ ಹರಟೆಗಾಗಿ. ನಿಮ್ಮ ಬಾಲ್ಯದ ಗೆಳೆಯನೊಡನೆ ಸಂಪರ್ಕ ಕಳೆದು ಹೋಗಿದೆಯೇ? ಆರ್ಕುಟ್‍ನಲ್ಲಿ ಹುಡುಕಾಡಿದರೆ ಸಿಗದೇ ಇರುವ ಸಾಧ್ಯತೆ ಕಡಿಮೆ!. ನಿಮ್ಮ ಸ್ನೇಹಿತನ ಬಗ್ಗೆ ಮೆಚ್ಚುಗೆಯ ಮಾತಾಡಬೇಕೆ? ಅವನ ಗುಣ ವಿಶೇಷಗಳನ್ನು ಇತರರಿಗೆ ಪರಿಚಯಿಸಬೇಕೆ? ಹಾಗಿದ್ದರೆ ನೀವು ಅತನಿಗೂಂದು "ಟೆಸ್ಟಿಮೋನಿ" ಬರೆಯಬಹುದು. ನಿಮ್ಮ ಮಧುರ ಕ್ಷಣಗಳನ್ನು ನೆನಪಿಸುವ ಭಾವಚಿತ್ರ, ವೀಡಿಯೋಗಳನ್ನು ಇತರರೊಡನೆ ಹಂಚಿಕೊಳ್ಳಬೇಕೇ? , ಆರ್ಕುಟ್‍ನಲ್ಲಿ ಸುಲಭವಾಗಿ ಮಾಡಬಹುದು. ಹೊಸ ಚಿತ್ರಗಳ ಬಗ್ಗೆ, ಹೊಸ ವಿಚಾರಗಳ ಬಗ್ಗೆ ಇತರರ ಅಭಿಪ್ರಾಯವನ್ನು ತಿಳಿಯಬೇಕೇ? ಆರ್ಕುಟ್‍ನ ಕಮ್ಯೂನಿಟಿ ಪುಟದಲ್ಲಿ ಹೊಸ ಅಂಕಣವೊಂದನ್ನು ಆರಂಭಿಸುವ ಮೂಲಕ ಒಂದು ಚರ್ಚಾ ವೇದಿಕೆಯನ್ನೇ ಸೃಷ್ಟಿಸಬಹುದು.

ಯಾಕಿಷ್ಟು ಜನಪ್ರಿಯ ?

ಮೇಲೆ ಹೇಳಿರುವ ಎಲ್ಲಾ ಸೌಲಭ್ಯಗಳನ್ನು ಸುಲಭವಾಗಿ ಒದಗಿಸಿರುವುದರ ಜೊತೆಗೆ ಆರ್ಕುಟ್‍ನ ಜನಪ್ರಿಯತೆಗೆ ಇನ್ನೊಂದು ಪ್ರಮುಖ ಕಾರಣವೂ ಇದೆ. ಅದೆಂದರೆ ಆರ್ಕುಟ್ ಒದಗಿಸುವ ಮುಕ್ತ ವಿಹಾರ. ಯಾರು ಯಾರ ಪುಟಗಳನ್ನು ಬೇಕಾದರೂ ವೀಕ್ಷಿಸಬಹುದು. ನಿಮ್ಮ ಸ್ನೇಹಿತ ಅವನ ಸ್ನೇಹಿತರೊಂದಿಗೆ ಏನೇನು ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದಾನೆ, ಅವನಿಗಿರುವ ಸ್ನೇಹಿರರು ಯಾರ್ಯಾರು? ಅವನ ಅಭಿರುಚಿಗಳೇನು? ಅವನ ಬಗ್ಗೆ ಯಾರು ಯಾರು ಏನೇನು ಅಭಿಪ್ರಾಯಪಡುತ್ತಾರೆಂಬುದನ್ನು ಸುಲಭವಾಗಿ ನೋಡಬಹುದು. ಅವನ ಸ್ನೇಹಲೋಕದಲ್ಲಿ ನಿಮ್ಮ ಸ್ನೇಹಿತರೂ ಸಿಕ್ಕರೆ ಅವರನ್ನೂ ನಿಮ್ಮ ಸ್ನೇಹಿತರ ಬಳಗಕ್ಕೆ ಸೇರಿಸಿಕೊಳ್ಳಬಹುದು. ಬಹುಷಃ ಇಷ್ಟೊಂದು ಮುಕ್ತತೆ, ಸ್ವಾತಂತ್ರ್ಯಗಳನ್ನು ಒದಗಿಸಿದ್ದು ಆರ್ಕುಟ್‍ನಲ್ಲೇ ಮೊದಲು ಎನ್ನಬಹುದು.

ದುರ್ಬಳಕೆ:

ಮೇಲೆ ಹೇಳಿರುವ ಅಂಶಗಳೆಲ್ಲ ಆರ್ಕುಟ್‍ನ ಒಂದು ಮುಖವನ್ನು ಪರಿಚಯಿಸಿದರೆ ಆರ್ಕುಟ್‍ನ ಇನ್ನೊಂದು ಮುಖದ ಬಗ್ಗೆಯೂ ಹೇಳಲೇ ಬೇಕಾಗುತ್ತದೆ. ಊರಿದ್ದಲ್ಲಿ ಕೊಳಗೇರಿಯೂ ಇದ್ದೇ ಇರುತ್ತದೆ ಎಂಬ ಮಾತು ಆರ್ಕುಟ್‍ಗೂ ಅನ್ವಯಿಸುತ್ತದೆ. ಯುವ ಜನಾಂಗದ ಮಧ್ಯೆ ಅತ್ಯಂತ ಜನಪ್ರಿಯತೆಯನ್ನು ಗಳಿಸಿರುವ ಆರ್ಕುಟ್ ‍ನ ದುರ್ಬಳಕೆಯೂ ಅನೂಚಿತವಾಗಿ ಸಾಗುತ್ತಲೇ ಇದೆ. ಅಶ್ಲೀಲ ವಿಷಯಗಳ ಬಗ್ಗೆ ಚರ್ಚಿಸಲು, ವಿಷಯಗಳಬಗ್ಗೆ, ವ್ಯಕ್ತಿಗಳ ಬಗ್ಗೆ ಸಲ್ಲದ ಅಪಪ್ರಚಾರ ಮಾಡಲು ಆಮೂಲಕ ಅಮಾಯಕ ಯುವ ಜನತೆಯನ್ನು ತಪ್ಪು ಹಾದಿಗೆಳೆಯುವಲ್ಲಿ ಆರ್ಕುಟ್‍ನ ದುರ್ಬಳಕೆಯಾಗುತ್ತಿರುವುದು ಖೇದಕರ ಸಂಗತಿ. ಈ ಮಧ್ಯಮದಿಂದ ಅನುಕೂಲಗಳೆಷ್ಟು ಆಗಿವೆಯೋ, ಅಷ್ಟೇ ಅನನುಕೂಲಗಳೂ ಆಗುತ್ತಿವೆ. ಆದರೆ ವಿಚಾರವಂತರಾದ ನಾವು ಇದರ ಸದ್ಬಳಕೆಯನ್ನು ಮಾಡಿಕೊಳ್ಳಬೇಕೇ ವಿನಃ ದುರ್ಬಳಕೆಯನ್ನಲ್ಲ.

Friday 22 June, 2007

ಚೆಲುವಿನ ಚಿತ್ತಾರ - ಇದು ಸತ್ಯ ಕಥೆ, ತಮಿಳು ನಾಡಿನ ತಿರುಚ್ಚಿಯಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿದೆ. ಈ ಚಿತ್ರದಲ್ಲಿ ಬರುವ ಎಲ್ಲ ಪಾತ್ರಗಳೂ ಜೀವಂತ ಎಂಬ ಮಾಹಿತಿಯೊಂದಿಗೆ ಎಸ್. ನಾರಾಯಣ್ ಚೆಲುವಿನ ಚಿತ್ತಾರವನ್ನು ಬರೆಯಲು ಆರಂಭಿಸುತ್ತಾರೆ. ತಮಿಳಿನ "ಕಾದಲ್" ಚಿತ್ರವನ್ನು ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಕನ್ನಡೀಕರಿಸಿದ್ದಾರೆ ನಾರಾಯಣ್.

ಟಿ. ನರಸೀಪುರದಲ್ಲಿ ಕಥೆ ಆರಂಭಗೊಳ್ಳುತ್ತದೆ... ಮಾದೇಶ ಎಂಬ ಬಡ ಮೆಕ್ಯಾನಿಕ್ ಹುಡುಗ(ಗಣೇಶ್) ಮತ್ತು ಐಶ್ವರ್ಯ (ಅಮೂಲ್ಯ) ಎಂಬ ಶ್ರೀಮಂತ ಬಾಲೆಯ ಭೇಟಿ ಬೈಕ್ ಢಿಕ್ಕಿಗೊಳ್ಳುವ ಪ್ರಕರಣದೊಂದಿಗೆ ಆರಂಭವಾಗಿ, ಆ ಭೇಟಿ ಜಗಳವಾಗಿ, ಆ ಜಗಳವೇ ನಂತರ ಪ್ರೀತಿಯಾಗಿ ಮಾರ್ಪಡುತ್ತದೆ. ಐಶ್ವರ್ಯಳ ಮದುವೆ ಪ್ರಸ್ತಾಪ ಆಕೆಯ ಮಾವನ ಮಗನೊಂದಿಗೆ ನಡೆಯುತ್ತದೆ... ಹೆದರಿದ ಐಶ್ವರ್ಯ ಮತ್ತು ಮಾದೇಶ ಬೇರೆ ಗತಿಯಿಲ್ಲದೆ ಬೆಂಗಳೂರಿಗೆ ಓಡಿ ಹೋಗುತ್ತಾರೆ.ಅಲ್ಲಿ ಸ್ನೇಹಿತನೊಬ್ಬನ (ಕೋಮಲ್) ಸಹಾಯದಿಂದ ಮದುವೆಯಾಗಿ ಬಾಡಿಗೆ ಮನೆಯೊಂದನ್ನು ಹಿಡಿಯುತ್ತಾರೆ... ಅಷ್ಟರಲ್ಲಿ ಐಶ್ವರ್ಯಳ ಗೆಳತಿಯಿಂದ ಆಕೆ ಓಡಿ ಹೋಗಿರುವ ವಿಷಯ ತಿಳಿದ ಐಶ್ವರ್ಯಳ ಮನೆಯವರು ಬೆಂಗಳೂರಿಗೆ ಬಂದು ಅವರನ್ನು ಹುಡುಕುವಲ್ಲಿ ಯಶಸ್ವಿಯಾಗುತ್ತಾರೆ. ಆಗಿದ್ದಾಯಿತು, ಮನೆಗೆ ಬನ್ನಿ, ಎಲ್ಲರೊಂದಿಗೆ ಮಾತಾಡಿ ಮದುವೆಯನ್ನು ಶಾಸ್ತ್ರೋಕ್ತವಾಗಿ ಮಾಡಿಸುತ್ತೇವೆ ಎಂದು ನಂಬಿಸಿ ಅವರನ್ನು ವಾಪಾಸ್ ಮನೆಗೆ ಕರೆ ತರುತ್ತಾರೆ... ಆದರೆ ವಾಪಸ್ ಬಂದ ಮೇಲೆ ಅಲ್ಲಿ ನಡೆಯುವ ಘಟನೆಗಳೇ ಬೇರೆ... ಈ ಯುವ ಪ್ರೇಮಿಗಳ ಪರಿಸ್ಥಿತಿ ಹೃದಯ ವಿದ್ರಾವಕವಾಗುತ್ತದೆ... ಚಿತ್ರದ ಅಂತ್ಯ ವಿಭಿನ್ನವಾಗಿದೆ.. ಸತ್ಯ ಕಥೆಯೆಂದು ಮೊದಲೇ ಹೇಳಿರುವುದರಿಂದ ಈ ರೀತಿಯ ಅಂತ್ಯವನ್ನು ಸ್ವೀಕರಿಸಲೇ ಬೇಕಾದುದು ಅನಿವಾರ್ಯವಾಗಿದೆ... ಪೊರ್ವಾರ್ಧ ಸಂಪೂರ್ಣ ಹಾಸ್ಯಮಯ, ಪ್ರೇಮಮಯ, ಲವಲವಿಕೆಯ ಆಗರ... ಉತ್ತರಾರ್ಧ ಪ್ರೇಮಿಗಳು ಪಡುವ ಪಾಡು ಹಾಗೂ ಗೋಳಿನ ಸಾಗರ...

ವಿಭಿನ್ನ ಪಾತ್ರವಾದರೂ ಅಭಿನಯದಲ್ಲಿ ಗಣೇಶ್ ಮಿಂಚುತ್ತಾರೆ.. ಕೋಮಲ್ ಹಾಸ್ಯ ಮನಸ್ಸಿಗೆ ಮುದ ನೀಡುತ್ತದೆ... ಹೊಸ ನಟಿ ಅಮೂಲ್ಯ ಪೂರ್ವಾರ್ಧದಲ್ಲಿ ಲವಲವಿಕೆಯಿಂದ ನಟಿಸಿ ಮನ ಗೆಲ್ಲುತ್ತಾಳೆ.. ಆದರೆ ದುಃಖದ ಸನ್ನಿವೇಶಗಳಲ್ಲಿ ಆಕೆಯ ಅಪ್ರಭುದ್ಧತೆ ಎದ್ದು ಕಾಣುತ್ತದೆ. ಆದರೆ ನಾಯಕಿಯಾಗಿ ಮೊದಲ ಚಿತ್ರವಾಗಿದ್ದರೂ ಹಲವಾರು ಸನ್ನಿವೇಶಗಳನ್ನು ಅಮೂಲ್ಯಳಿಂದ ಉತ್ತಮವಾದ ಅಭಿನಯವನ್ನು ಹೊರತೆಗೆಯುವಲ್ಲಿ ನಾರಾಯಣ್ ಯಶಸ್ವಿಯಾಗಿದ್ದಾರೆ.

ಮನೋಮೂರ್ತಿ ಸಂಗೀತ ಇಂಪಾಗಿದೆ. ಎರಡು ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ಪೋಷಕ ನಟರೆಲ್ಲ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಚಿತ್ರದ ಕಥೆಯಲ್ಲಿ ಅಂತ ಹೊಸತನವೇನೂ ಇಲ್ಲದಿದ್ದರೂ ಚಿತ್ರಕಥೆ ಎಲ್ಲೂ ಹಳಿ ತಪ್ಪುವುದಿಲ್ಲ. ಮಹಿಳಾ ಪ್ರೇಕ್ಷಕರನ್ನು ಆಕರ್ಷಿಸುವ ಎಲ್ಲ ಮಸಾಲಗಳನ್ನು ಚಿತ್ರ ಒಳಗೊಂಡಿರುವುದರಿಂದ ಹಾಗೂ ಒಂದೆರಡು ಹಾಡುಗಳು ಚೆನ್ನಾಗಿರುವುದರಿಂದ ಚಿತ್ರ ಯಶಸ್ವಿಯಾದರೆ ಯಾವುದೇ ಆಶ್ಚರ್ಯವಿಲ್ಲ.

Saturday 16 June, 2007

73-ಶಾಂತಿ ನಿವಾಸ - ಒಂದು ಸುಂದರ ಅನುಭವ!

73- ಶಾಂತಿ ನಿವಾಸ - ಸುದೀಪ್ ನಿರ್ದೇಶನದ ಎರಡನೇ ಚಿತ್ರ. ಹೃಷೀಕೇಶ್ ಮುಖರ್ಜಿಯವರ "ಬಾವರ್ಚಿ" ಚಿತ್ರವನ್ನು ಕನ್ನಡ ಪರದೆಯ ಮೇಲೆ ಹೇಗೆ ತಂದಿದ್ದಾರೋ ಎಂಬ ಸಣ್ಣ ಭಯದ ನಡುವೆಯೇ ಚಿತ್ರಮಂದಿರ ಪ್ರವೇಶಿಸಿದೆ... ಆರಂಭದಲ್ಲೇ ಒಂದು ಆಶ್ಚರ್ಯ ಕಾದಿತ್ತು... ಮೊದಲ ದೃಶ್ಯದಲ್ಲೇ ಶಿವಣ್ಣ ಪ್ರತ್ಯಕ್ಷ!!!. ಪಾತ್ರಗಳ ಪರಿಚಯಿಸುವ ರೀತಿ ಅತ್ಯಂತ ವಿಶಿಷ್ಟವಾಗಿ ಬಂದಿದೆ... ಈ ಕೆಲಸವನ್ನು ಶಿವಣ್ಣ ಅಚ್ಚುಕಟ್ಟಾಗಿ ಮಾಡಿದ್ದಾರೆ.

ಚಿತ್ರ ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಎಲ್ಲೂ ಬೇಸರ ತರಿಸದ ರೀತಿಯಲ್ಲಿ ಎರಡೂ ಮುಕ್ಕಾಲು ಗಂಟೆಗಳಲ್ಲಿ ಒಂದು ಕೌಟುಂಬಿಕ ಕಥಾ ಹಂದರವನ್ನು ನವಿರಾಗಿ ನಿರೂಪಿಸಿದ್ದಾರೆ ಕಿಚ್ಚ ಸುದೀಪ್.. ಪ್ರತಿಯೊಂದು ಪಾತ್ರವೂ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ. ಯಾವೊಂದು ಪಾತ್ರವೂ, ಸನ್ನಿವೇಶವೂ ಅನವಶ್ಯಕವೆನಿಸುವುದಿಲ್ಲ... ಚಿತ್ರಕಥೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸುವಲ್ಲಿ ಸುದೀಪ್ ಸಫಲರಾಗಿದ್ದಾರೆ.

ಚಿತ್ರದ ಕಥೆ ಸರಳವಾದರೂ ಸುಂದರವಾದುದು. "73-ಶಾಂತಿ ನಿವಾಸ" -ಇದು ಹೆಸರಿಗೆ ಮಾತ್ರ ಶಾಂತಿ ನಿವಾಸ.. ಒಳಗಿರುವುದು ಬರೀ ಜಗಳ, ಅಶಾಂತಿ. ಇಂತಹ ಗಲಾಟೆ ಸಂಸಾರದಲ್ಲಿ ಅಡುಗೆ ಭಟ್ಟರಾಗಿ ಬಂದವರ್ಯಾರೂ ಬಹಳ ದಿನ ಉಳಿಯುವುದೇ ಇಲ್ಲ... ಈ ಅವಿಭಕ್ತ ಕುಟುಂಬದ ಮುಖ್ಯಸ್ಥ ಕೈಲಾಶನಾಥರಿಗೆ (ಮಾಸ್ಟರ್ ಹಿರಣ್ಣಯ್ಯ) ನಾಲ್ವರು ಗಂಡು ಮಕ್ಕಳು. ಹಿರಿಯ ಮಗ ರಾಮನಾಥ (ಶ್ರೀನಿವಾಸ ಮೂರ್ತಿ) ಮತ್ತು ಸೀತಾ ದೇವಿ (ವೈಶಾಲಿ ಕಾಸರವಳ್ಳಿ) ದಂಪತಿಗಳಿಗೆ ಒಬ್ಬಳು ಮಗಳು ನೀತಾ (ಅನು ಪ್ರಭಾಕರ್). ಎರಡನೇ ಮಗ ಮತ್ತು ಸೊಸೆ ಕಾರು ಅಪಘಾತದಲ್ಲಿ ಅಸು ನೀಗಿರುತ್ತಾರೆ. ಅವರ ಮಗಳು ರಾಧಾ (ದೀಪು) ಈ ಚಿತ್ರದ ನಾಯಕಿ.ಮೂರನೆಯವನು ಕಾಶೀನಾಥ (ರಮೇಶ್ ಭಟ್) ಮತ್ತು ಆತನ ಮಡದಿ ಶೋಭಾ (ಚಿತ್ರಾ ಶಣೈ) ದಂಪತಿಗಳಿಗೆ ಒಬ್ಬನೇ ಮಗ. ಇನ್ನು ನಾಲ್ಕನೆಯ ಸುಪುತ್ರನೇ ಜಗನ್ನಾಥ (ಕೋಮಲ್) - ಸ್ವಯಂ ಘೋಷಿತ ಸಂಗೀತ ನಿರ್ದೇಶಕ!. ತನ್ನ ಚಿತ್ರ ವಿಚಿತ್ರ ರಾಗ ಸಂಯೋಜನೆಗಳಿಂದ ಮನೆಯವರ ತಲೆ ತಿಂದು ನೋಡುಗರಿಗೆ ನಗೆ ಬುಗ್ಗೆಯನ್ನು ತರಿಸುವಾತ!!!ಈ ಕುಟುಂಬದ ಜನರಲ್ಲಿ ಸಾಮರಸ್ಯವೇ ಇಲ್ಲ!!. ಸೊಸೆಯರಿಬ್ಬರೂ ಮೈಗಳ್ಳಿಯರು. ಮನೆಗೆಲಸ ಮಾಡದ ಗಂಡು ಮಕ್ಕಳು... ನಾಟ್ಯಕಲಿಕೆಯಲ್ಲಿ ನಿರತಳಾದ ಅಹಂಕಾರೀ ಮೊಮ್ಮಗಳು ನೀತು (ಅನು ಪ್ರಭಾಕರ್) ಇವರುಗಳ ನಡುವೆ ಪಾಪ ಬೆಳಗಿನ ಕಾಫಿಯನ್ನು ಕೇಳುವವರೂ ಇಲ್ಲದ ಹಿರಿಯ ತಲೆ ಕೈಲಾಶನಾಥರು!. ಅಡುಗೆಯವರಿಲ್ಲದೇ ಇವರ ದಿನಚರಿಯೇ ಓಡುವುದಿಲ್ಲ.. ಆದರೆ ಈ ರೀತಿ ಕಲಹಪ್ರಿಯ, ಅಶಾಂತಿ ನಿಲಯದಲ್ಲುಳಿಯಲು ಯಾವ ಅಡುಗೆ ಭಟ್ಟನೂ ತಯಾರಿಲ್ಲ!!!ಹೀಗಿರುವ ಕುಟುಂಬಕ್ಕೆ ಅಡುಗೆ ಭಟ್ಟನಾಗಿ ನಾಯಕ ರಘು (ಸುದೀಪ್) ಪ್ರವೇಶಿಸುತ್ತಾನೆ. ಒಡೆದ ಮನಗಳನ್ನು ಬೆಸೆದು ಒಂದು ಮಾಡುತ್ತಾನೆ. ಎಲ್ಲರ ಹೃದಯದಲ್ಲೂ ಸ್ಥಾನ ಪಡೆಯುತ್ತಾನೆ. ದ್ವೇಷತುಂಬಿರುವ ಮನೆಯಲ್ಲಿ ಪ್ರೀತಿಯ ಕಂಪನ್ನು ಹರಡುತ್ತಾನೆ. ಸಕಲ ಕಲಾ ಪ್ರವೀಣನಾದ ಈತ ಅಡುಗೆಯ ಜೊತೆಗೆ, ಹಾಡುತ್ತಾನೆ, ನೃತ್ಯ ಕಲಿಸುತ್ತಾನೆ, ಮನೆಗೆಲಸ ಮಾಡುತ್ತಾನೆ, ಮನೆ ಪಾಠವನ್ನೂ ಹೇಳುತ್ತಾನೆ.. ಹೀಗೆ ಎಲ್ಲರ ಮನ ಗೆದ್ದು ಮನೆಯನ್ನು ನಿಜವಾದ ಶಾಂತಿನಿವಾಸವನ್ನಾಗಿಸುತ್ತಾನೆ... ಹೀಗಿರುವಾಗ, ತಾತ ಕೈಲಾಶನಾಥರು ಸದಾ ಕಾಪಾಡಿಕೊಂಡು ಬಂದಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಒಡವೆ, ನಗ ನಾಣ್ಯಗಳಿದ್ದ ಪೆಟ್ಟಿಗೆಯ ದರೋಡೆಯಾಗುತ್ತದೆ!!!! ಜೊತೆಗೆ ಅಡುಗೆ ಭಟ್ಟ ರಘು ಕೂಡ ನಾಪತ್ತೆ!!! ಮುಂದೇನಾಗುತ್ತದೆ??? ರಘು ಕಳ್ಳನೇ??? ಅವನೇಕೆ ಈ ಮನೆಗೆ ಬಂದ??? ಒಡವೆಗಳು ಕಾಣೆಯಾಗಲು ಕಾರಣವೇನು??? ತೆರೆಯ ಮೇಲೆ ವೀಕ್ಷಿಸಿ... ಚಿತ್ರದ ಅಂತ್ಯ ವಿಶಿಷ್ಟವಾಗಿ, ಸುಂದರವಾಗಿ, ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ.

ಚಿತ್ರ ಆರಂಭಗೊಳ್ಳುವುದು ಶಿವಣ್ಣನಿಂದಾದರೆ ಅಂತ್ಯಗೊಳ್ಳುವುದು ಸಾಹಸ ಸಿಂಹ ವಿಷ್ಣುವರ್ಧನರಿಂದ!!!...

ಸಕಲ ಕಲಾ ಪ್ರವೀಣನಾದ ಅಡುಗೆ ಭಟ್ಟ ರಘುವಿನ ಪಾತ್ರದಲ್ಲಿ ಸುದೀಪ್ ಪರಕಾಯ ಪ್ರವೇಶ ಮಾಡಿದ್ದು, ಬಹುಕಾಲ ನೆನಪಿನಲ್ಲುಳಿಯುವ ಅಭಿನಯವನ್ನು ನೀಡಿದ್ದಾರೆ. ಬಹಳ ಕಾಲದ ನಂತರ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿರುವ ಕನ್ನಡ ರಂಗಭೂಮಿಯ ಹಿರಿಯ ನಟ, ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ಭಾವಪೂರ್ಣ ಅಭಿನಯವನ್ನು ಮನಃ ಪೂರ್ತಿಯಾಗಿ ಸವಿಯಬಹುದು. ಶ್ರೀನಿವಾಸಮೂರ್ತಿ, ರಮೇಶ್ ಭಟ್, ದೀಪು, ಅನು ಪ್ರಭಾಕರ್, ವೈಶಾಲಿ ಕಾಸರವಳ್ಳಿ, ಚಿತ್ರ ಶಣೈ ಎಲ್ಲರ ಅಭಿನಯವೂ ಸೂಪರ್!. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಬಾಲಿವುಡ್, ಟಾಲಿವುಡ್, ಕಾಲಿವುಡ್‍ಗಳಿಂದ ನಟಿಯರನ್ನು ಆಮದು ಮಾಡಿಕೊಳ್ಳುವ ನಮ್ಮ ನಿರ್ಮಾಪಕ, ನಿರ್ದೇಶಕರ ಕಪಾಳಕ್ಕೆ ಹೊಡೆಯುವ ರೀತಿಯಲ್ಲಿ ನಮ್ಮ ದೀಪು ನಟಿಸಿದ್ದಾಳೆ.ನಾಟ್ಯ ಗುರುವಾಗಿ ಅರುಣ್ ಸಾಗರ್, "ಸಂಗೀತ ನಿರ್ದೇಶಕ"ನಾಗಿ ಕೋಮಲ್ ಕುಮಾರ್ ಚೆನ್ನಾಗಿ ನಗಿಸುತ್ತಾರೆ.ಹಾಡುಗಳು ಅತ್ಯುತ್ತಮವಲ್ಲದಿದ್ದರೂ ತೀರಾ ಕಳಪೆಯೂ ಅಲ್ಲ... ಆದರೆ ಸಂಗೀತ ಇನ್ನೂ ಸ್ವಲ್ಪ ಚೆನ್ನಾಗಿ ಬರಬಹುದಾಗಿತ್ತು.. ಹಾಡುಗಳ ಚಿತ್ರೀಕರಣ ಚೆನ್ನಾಗಿ ಬಂದಿದೆ. ರಾಜೇಶ್ ಕೃಷ್ಣನ್ ಹಾಡಿರುವ "ಪ್ರೀತಿ ಎಂದರೆ ಹೀಗೇನೆ" ಶಾಸ್ತ್ರೀಯ ಸಂಗೀತವಾಗಿದ್ದು ಇದರ ಚಿತ್ರೀಕರಣ ಚನ್ನಾಗಿ ಬಂದಿದೆ. ಮೇಲುಕೋಟೆಯಲ್ಲಿ ರಾತ್ರಿ ಹೊತ್ತು ದೀಪಗಳ ಮಧ್ಯೆ ಚಿತ್ರೀಕರಣಗೊಂಡ ಇನ್ನೊಂದು ಹಾಡೂ ಸಹ ಮನ ಗೆಲ್ಲುವಂತಿದೆ.

ಒಟ್ಟಿನಲ್ಲಿ 73-ಶಾಂತಿ ನಿವಾಸ ಮನೆ ಮಂದಿಯೆಲ್ಲ ಕುಳಿತು ಆನಂದಿಸಬಹುದಾದ ಸುಂದರ ಕೌಟುಂಬಿಕ ಚಿತ್ರ.ಇಂತಹ ಸುಂದರ ಚಿತ್ರ ಮೊದಲು ಕನ್ನಡದಲ್ಲಿ ಬರದೇ ಹಿಂದಿಯಲ್ಲಿ ಬಂತಲ್ಲಾ ಎಂಬುದೊಂದೇ ಕೊರಗು. ಆದರೂ ಇದು ಅತ್ಯಂತ ಸುಂದರವಾಗಿ ಕನ್ನಡೀಕರಣಗೊಂಡಿದೆ. ರೀಮೇಕ್, ಸ್ವಮೇಕ್‍ಗಳೆಂಬ ಚರ್ಚೆಯನ್ನು ಬದಿಗೊತ್ತಿ ಎಲ್ಲರೂ ನೋಡಿ ಸವಿಯಬಹುದಾದ ಚಿತ್ರ. 73-ಶಾಂತಿ ನಿವಾಸಕ್ಕೆ ಶುಭವಾಗಲಿ.