ರಮೇಶ್ ಅರವಿಂದ್ ನಿರ್ದೇಶನದ ಎರಡನೇ ಪ್ರಯತ್ನವಾದ "ಸತ್ಯವಾನ್ ಸಾವಿತ್ರಿ" ಹಾಸ್ಯದ ಹೊನಲನ್ನೇ ಹರಿಸುತ್ತದೆ. ೧೯೬೯ ರಲ್ಲಿ ತೆರೆಕಂಡ "ಕ್ಯಾಕ್ಟಸ್ ಫ್ಲವರ್" ಎಂಬ ಹಾಲಿವುಡ್ ಚಿತ್ರದ ಕಥೆಯಿಂದ ಪ್ರೇರಿತವಾದ ಈ ಚಿತ್ರಕ್ಕೆ ರಮೇಶ್ ತಮ್ಮದೇ ಆದ ಶೈಲಿಯಲ್ಲಿ ನವಿರಾದ, ಹಾಸ್ಯ ಭರಿತವಾದ ಚಿತ್ರಕಥೆಯನ್ನು ಬರೆದು ನಿರ್ದೇಶಿಸಿದ್ದಾರೆ. ಆರಂಭದ ದೃಶ್ಯದಿಂದ ಹಿಡಿದು ಕೊನೆಯ ದೃಶ್ಯದವರೆಗೂ ಹಾಸ್ಯವೇ ತುಂಬಿ ತುಳುಕತ್ತಿದೆ. ನಿರೂಪಣೆಯಲ್ಲಿ ಎಲ್ಲಿಯೂ ಸೋಲದ ರಮೇಶ್ ಚಿತ್ರವನ್ನು ಒಂದು ಅದ್ಭುತ ಹಾಸ್ಯ ಚಿತ್ರವನ್ನಾಗಿಸಿದ್ದಾರೆ. ಅವರ ಈ ಶ್ರಮಕ್ಕೆ HATS OFF
ಇದು ಅವಿವಾಹಿತ ದಂತವೈದ್ಯ ಡಾ. ಸತ್ಯವಾನನ (ರಮೇಶ್) ಕಥೆ. ಸುಂದರವಾದ ಹೆಣ್ಣು ಮಕ್ಕಳನ್ನು ಮೋಡಿಮಾಡಿ ತನ್ನ ಬಲೆಗೆ ಹಾಕಿಕೊಂಡು ಅವರೊಡನೆ ಕೆಲವು ದಿನಗಳ ಕಾಲ ಸುತ್ತಾಡಿ, ಮೋಜು ಮಾಡಿ, ಮುಂದೊಂದು ದಿನ ಅವರ ಸಂಗ ಬೇಸರ ತಂದಕೂಡಲೇ ಜುಬ್ಬಾ ಧರಿಸಿ, ಅತ್ಯಂತ ವಿಧೇಯತೆಯಿಂದ "ನನಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿವೆ, ಕ್ಷಮಿಸಿ" ಎಂದು ಸುಳ್ಳು ಹೇಳಿ ಅವರಿಂದ ಮುಕ್ತಿ ಪಡೆಯುವುದೇ ಈ ಸ್ತ್ರೀ-ಲೋಲ ದಂತ ವೈದ್ಯನ ಕಾಯಕ. ಹೀಗೆ ಬೇಡದ ಹೆಣ್ಣುಮಕ್ಕಳಿಂದ ಬಿಡುಗಡೆ ಪಡೆಯುವ ಕಾಯಕಕ್ಕೆ "ಆಪರೇಷನ್ ಜುಬ್ಬಾ" ಎಂಬ ಹೆಸರು ಬೇರೆ!!!. ಮದುವೆಯೆಂಬ ಬಂಧನದಲ್ಲಿ ಸಿಲುಕಲೊಪ್ಪದೇ ಹುಡುಗಿಯರೊಂದಿಗೆ ಒಂದಷ್ಟು ದಿನ ಅಡ್ಡಾಡಿಕೊಂಡು ಆಕೆ ಬೇಜಾರಾದಾಗ ಇನ್ನೊಬ್ಬಳ ಕಡೆ ಗಮನ ಹರಿಸುವ ಸತ್ಯವಾನನ ಬಲೆಗೆ ಬೀಳುವ ಮತ್ತೊಬ್ಬ ಹುಡುಗಿಯೇ ಮೋನಿಷಾ (ಜನ್ನಿಫರ್ ಕೋತ್ವಾಲ್). ಸರಿ, ಮಾಮೂಲಿನಂತೆ ಈಕೆಯೊಡನೆಯೂ ಸುತ್ತಾಡಿ "ಯಾಕೋ ಜುಂ ಜುಂ ಅಂತೈತೆ ನನ್ ಮೈಯ್ಯಲ್ಲಿ..." ಅಂತೆಲ್ಲ ಹಾಡಿ ಕುಣಿದು ಕುಪ್ಪಳಿಸಿದ ಮೇಲೆ "ಆಪರೇಷನ್ ಜುಬ್ಬಾ"ದ ಮೂಲಕ ಈಕೆಯಿಂದ ಕಳಚಿಕೊಳ್ಳಲು ಯತ್ನಿಸುತ್ತಾನೆ ಡಾ ಸತ್ಯ. ಆದರೆ ಮೋಸವಾಗುವುದೇ ಇಲ್ಲಿ... ಮದುವೆಯಾಗಿ ಮಕ್ಕಳಿದೆ ಎಂದು ಪ್ರಾಮಾಣಿಕವಾಗಿ ಹೇಳಿರುವ ನಿನ್ನ ನಿಷ್ಠೆ ನನಗೆ ತುಂಬಾ ಇಷ್ಟವಾಯ್ತು.. ನೀನೇ ನನಗೆ ಸರಿಯಾದ ಜೋಡಿ ಎಂದು ಬಿಡುತ್ತಾಳೆ ಈ ಬಾಲೆ!!!. ಈಕೆಯಿಂದ ಬಚಾವಾಗಲು ಸುಳ್ಳುಗಳ ಮೇಲೆ ಸುಳ್ಳು ಹೇಳಬೇಕಾಗುತ್ತದೆ. ಮದುವೆಯಾಗದಿದ್ದರೆ ಆಸ್ತಿಯನ್ನೆಲ್ಲ ನಾಯಿ ಕಲ್ಯಾಣ ಸಂಘಕ್ಕೆ ಬರೆಯುವುದಾಗಿ ತಾತ (ದತ್ತಣ್ಣ) ಹೆದರಿಸಿದಾಗ ಮೋನಿಷಾಳನ್ನೇ ಮದುವೆಯಾಗುವ ತೀರ್ಮಾನಕ್ಕೆ ಬರುತ್ತಾನೆ ಡಾ. ಸತ್ಯ. ಆದರೆ ಮೋನಿಷಾ ನಿನ್ನ ಪತ್ನಿಗೆ ನಾನು ಮೋಸ ಮಾಡಲಾರೆ, ಅವಳೊಪ್ಪುವುದಾದರೆ ಮಾತ್ರ ನಿನ್ನ ಜೊತೆ ಮದುವೆ... ಅವಳನ್ನು ಒಮ್ಮೆ ಮಾತಾಡಿಸಬೇಕು.. ತೋರಿಸು ಎಂದು ಹಠ ಹಿಡಿದಾಗ ತನ್ನ ಕ್ಲಿನಿಕ್ ನ ನರ್ಸ್ ಸುಬ್ಬಲಕ್ಷ್ಮಿ ಯಲ್ಲಿ (ಡೈಸಿ ಬೋಪಣ್ಣ) ತನ್ನ ಹೆಂಡತಿ "ಸಾವಿತ್ರಿ" ಯಾಗಿ ನಟಿಸುವಂತೆ ಕೇಳಿಕೊಳ್ಳುತ್ತಾನೆ. ಡಾ.ಸತ್ಯವಾನನ್ನು ಮಾನಸಿಕವಾಗಿ ಪ್ರೀತಿಸುವ ಸುಬ್ಬಲಕ್ಷ್ಮಿ ಇದಕ್ಕೆ ಒಪ್ಪುತ್ತಾಳೆ. ಮುಂದೇನಾಗುತ್ತದೆ?? ಕೊನೆಗೆ ಸತ್ಯವಾನನ ಸಾವಿತ್ರಿಯಾಗುವುದು ಯಾರು, ಈ ಎಲ್ಲ ಸಮಸ್ಯೆಗಳ ಸುಳಿಯಿಂದ ಡಾಕ್ಟರ್ ಹೇಗೆ ತಪ್ಪಿಸಿಕೊಳ್ಳುತ್ತಾನೆಂಬುದನ್ನು ರಮೇಶ್ ಅತ್ಯಂತ ದಕ್ಷವಾಗಿ, ಹೊಟ್ಟೆ ಹುಣ್ಣಾಗುವಂತೆ ನಗಿಸುವುದರ ಮೂಲಕ ತೆರೆಯ ಮೇಲೆ ತೋರಿಸಿದ್ದಾರೆ... ಒಂದು ಸುಳ್ಳನ್ನು ಮುಚ್ಚಿಡಲು ಸುಳ್ಳುಗಳ ಸರಮಾಲೆಯನ್ನೇ ಹರಿಸುವ ಸತ್ಯನ ಪಾಡನ್ನು ನೋಡಲು ಎರಡು ಕಣ್ಣುಗಳು ಸಾಲದು. ನೋಡಿ ಆನಂದಿಸಿ.
ಸತ್ಯವಾನನಾಗಿ ರಮೇಶ್‍ಗೆ ಫುಲ್ ಮಾರ್ಕ್ಸ್. . ಜೆನ್ನಿಫರ್ ಅಭಿನಯ ಓಕೆ. ಆದರೆ ಎಲ್ಲರ ಮೆಚ್ಚುಗೆಗೆ ಪಾತ್ರಳಾಗುವುದು ಕೊಡಗಿನ ಬೆಡಗಿ, ಕನ್ನಡತಿ ಡೈಸಿ ಬೋಪಣ್ಣ. ನರ್ಸ್ ಸುಬ್ಬಮ್ಮನ ಪಾತ್ರಕ್ಕೆ ಜೀವ ತುಂಬುವಂತೆ ಡೈಸಿ ಅಭಿನಯಿಸಿದ್ದಾಳೆ. ಉಳಿದಂತೆ ಮೋನಿಷಾಳ ಪ್ರೇಮಿಯಾಗಿ ಅನಿರುದ್ಧ, ಗೆಳೆಯನಾಗಿ ಮೋಹನ್, ದಂತ ಚಿಕಿತ್ಸೆಗಾಗಿ ಬರುವ ಶೆಟ್ಟರು (ಸುಂದರ್ ರಾಜ್) ಮತ್ತು ಪುಕ್ಕಲ ಗೌಡ (ಕೋಮಲ್ ಕುಮಾರ್) ನಗುವಿನ ಓಟಕ್ಕೆ ಮತ್ತಷ್ಟು ವೇಗವನ್ನು ಕೊಡುತ್ತಾರೆ. ಗುರುಕಿರಣ್ ಸಂಗೀತದಲ್ಲಿ ಮೂರು ಹಾಡುಗಳು ಸುಂದರವಾಗಿ ಮೂಡಿ ಬಂದಿವೆ. ಅದರಲ್ಲೂ "ಫಸ್ಟ್ ಟೈಮ್ ನಿನ್ನ ನೋಡಿದಾಗ.." ಹಾಡಂತೂ ಅತ್ಯಂತ ಸುಂದರವಾಗಿ ಚಿತ್ರಿತವಾಗಿದ್ದು ಕಣ್ಣು ಕಿವಿಗಳೆರಡಕ್ಕೂ ಮಹದಾನಂದವನ್ನುಂಟುಮಾಡುತ್ತದೆ. ಪಿ.ಕೆ.ದಾಸ್ ಛಾಯಾಗ್ರಹಣದಲ್ಲಿ ಮಿಂಚಿದ್ದಾರೆ.
ಕನ್ನಡದಲ್ಲಿ ಒಳ್ಳೊಳ್ಳೆಯ ಚಿತ್ರಗಳು ಬರುತ್ತಿರುವ ಈ ಶುಭ ಸಂದರ್ಭದಲ್ಲಿ "ಸತ್ಯವಾನ್ ಸಾವಿತ್ರಿ"ಯ ಆಗಮನ ಮತ್ತಷ್ಟು ಸಂತಸವನ್ನು ತರುತ್ತದೆ. ರಮೇಶ್ ಕನ್ನಡಕ್ಕೆ ನಿಜವಾಗಲೂ ಒಂದು ಕೊಡುಗೆ. ರಾಮಾ ಶ್ಯಾಮಾ ಭಾಮದ ನಂತರ ಹೆಚ್ಚಾಗಿದ್ದ ಜವಾಬ್ದಾರಿಯನ್ನು "ಸತ್ಯವಾನ್ ಸಾವಿತ್ರಿ"ಯ ಮೂಲಕ ಸಮರ್ಥವಾಗಿ ನಿಭಾಯಿಸಿದ್ದಾರೆ. .
ಇನ್ನೇಕೆ ತಡ... ಹೋಗಿ, ಮನೆ ಮಂದಿಯೆಲ್ಲ ಕುಳಿತು "ಸತ್ಯವಾನ್ ಸಾವಿತ್ರಿ"ಯನ್ನು ನೋಡಿ ನಕ್ಕು ನಲಿದು ಬನ್ನಿ. ನಗೆಗಡಲಲ್ಲಿ ತೇಲಾಡಿ.
ನನ್ನ ಅಂಕ - 9/10
Saturday, 30 June 2007
Subscribe to:
Post Comments (Atom)
1 comment:
looks like u watch lot of kannada movies.
Post a Comment