Friday 14 December, 2007

ಗಾಳಿಪಟ ಹಾಡುಗಳ ವಿಮರ್ಷೆ

ಚಿತ್ರ: ಗಾಳಿಪಟ
ಒಟ್ಟು ಹಾಡುಗಳು: 6
ನಿರ್ದೇಶನ: ಯೋಗರಜ್ ಭಟ್
ಸಂಗೀತ: ವಿ. ಹರಿಕೃಷ್ಣ
ಸಾಹಿತ್ಯ: ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಮತ್ತು ಹೃದಯ ಶಿವ
ಪಾತ್ರವರ್ಗ: ಗಣೇಶ್, ಡೈಸಿ ಬೋಪಣ್ಣ, ರಾಜೇಶ್, ದಿಗಂತ್, ನೀತು, ಭಾವನಾ ರಾವ್, ಅನಂತ್ ನಾಗ್, ರಂಗಾಯಣ ರಘು

1. ಆಕಾಶ ಇಷ್ಟೇ ಯಾಕಿದೆಯೋ.. ನನ್ ನೈ ನನ ನೈ.. ಗಾಳಿಪಟ.. ಗಾಳಿಪಟ (ಟಿಪ್ಪು, ಕುನಾಲ್ ಗಂಜಾವಾಲ) : ಚಿತ್ರದ ಶೀರ್ಷಿಕೆ ಗೀತೆ... ಉತ್ತಮ ಹಿನ್ನೆಲೆ ಸಂಗೀತ ಮತ್ತು ಕೇಳಿದಾಕ್ಷಣ ಒಂದು ರೀತಿಯ ಸಂಚಲನವನ್ನುಂಟುಮಾಡುವ ಲಯ ಪ್ರಧಾನ ಗೀತೆ.

ಅಂಕ - 8/10

2. ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ....ಇನ್ನೆಲ್ಲಿ ನನಗೇ ಉಳಿಗಾಲ (ಪೂರ್ತಿ ಸಾಹಿತ್ಯ ಮೇಲೆ ಇದೆ.. ಓದಿ) - (ಸೋನು ನಿಗಂ) : ಇದಕ್ಕೆ ನಿಜವಾಗಿಯೂ ಹರಿಕೃಷ್ಣ ಅವರೇ ಸಂಗೀತ ಕೊಟ್ಟೀದ್ದೋ ಅಥವ ಹರಿಕೃಷ್ಣರ ಒಳಗೆ ಮನೋಮೂರ್ತಿ ಸೇರಿಕೊಂಡು ಈ ಗೀತೆಗೆ ಸಂಗೀತ ಒದಗಿಸಿದರೋ ಎಂಬ ಅನುಮಾನ! ಮತ್ತೊಂದು ಅನಿಸುತಿದೆ ಯಾಕೋ ಇಂದು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.. ಜಯಂತ್ ಕಾಯ್ಕಿಣಿಯವರೊಳಗಡಗಿರುವ ಸಾಹಿತ್ಯ ಬ್ರಹ್ಮ ಮತ್ತೊಮ್ಮೆ ಅವನ ಲೇಖನಿಯ ಮೂಲಕ ಅವತರಿಸಿದ್ದಾನೆ.. ಅಬ್ಬಬ್ಬಾ ಈ ಮನುಷ್ಯನಿಗೆ ಅದೆಲ್ಲಿಂದ ಸಿಗುತ್ತವೆ ಈ ರೀತಿಯ ಪದಗಳು.. ಸಾಹಿತ್ಯ? ಚಿತ್ರವೊಂದಕ್ಕ್ಕಾಗಿಯೇ ಬರೆದ ಹಾಡಾದರೂ ಎಷ್ಟೊಂದು ಅರ್ಥಗರ್ಭಿತವಾಗಿದೆ... ಜಯಂತ್ ನೀವು ಕನ್ನಡ ಚಿತ್ರರಂಗದ ಮಟ್ಟಗೆ ಸಧ್ಯಕ್ಕಂತೂ ಒಂದು ಆಸ್ತಿ..

ಇದು ಎಲ್ಲ ಹಾಡುಗಳಲ್ಲಿ ಅತ್ಯುತ್ತಮ.. ಇದನ್ನು ಬರೆಯುವ ಮೊದಲು ಕನಿಷ್ಟ ಹತ್ತು ಸಲವಾದರೂ ಈ ಹಾಡನ್ನು ಕೇಳಿದ್ದೇನೆ.. ಮತ್ತೂ ಇದರ ಗುಂಗು ಹೋಗಿಲ್ಲ... ಇನ್ನೆಲ್ಲಿ ನನಗೇ ಉಳಿಗಾಲ?


ಅಂಕ - 9.5/10

3. ಆಹಾ ಈ ಬೆದರು ಬೊಂಬೆ - (ಉದಿತ್ ನಾರಾಯಣ್, ಅನುರಾಧಾ ಶ್ರೀರಾಂ) : ಹಾಡಿನ ಆರಂಭಿಕ ಹಿನ್ನೆಲೆ ಸಂಗೀತ ಮತ್ತು ಮೊದಲ ಸಾಲು ಸೊಗಸಾಗಿದೆ.. ಆದರೆ ನಂತರದ ಸಾಲುಗಳು ಮತ್ತು ಚರಣ ಸುಮಾರಾಗಿದೆ ಅಷ್ಟೇ.. ಉದಿತ್ ಇನ್ನೂ ಸ್ವಲ್ಪ ಉತ್ತಮವಾಗಿ ಹಾಡಬಹುದಿತ್ತು.

ಅಂಕ - 7/10

4. ನಧೀಂಧೀಂ ತನನಾ ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ(ಚಿತ್ರಾ) - ಶಾಸ್ತ್ರೀಯ ಸಂಗೀತ ಶೈಲಿಯ ಹಾಡು ಚಿತ್ರಾ ಸುಶ್ರ್ಯಾವ್ಯವಾಗಿ ಹಾಡಿದ್ದಾರೆ..ಅತ್ಯುತ್ತಮ ಸಾಹಿತ್ಯ.

ಅಂಕ - 9/10

5. ಕವಿತೆ (ವಿಜಯ್ ಪ್ರಕಾಶ್) :- Patho Song! ಕರುಣ ರಸ ಭರಿತ ಹಾಡು.. ಸಾಧಾರಣ.
ಅಂಕ - 6/10


6. ಜೀವ ಕಳೆವ (ಸೋನು ನಿಗಂ) - ಮಿಂಚಾಗಿ ನೀನು ಬರಲು ಧಾಟಿಯಲ್ಲೇ ಬರುವ ಹಾಡು.. ಸಾಹಿತ್ಯ ಯೋಗರಜ ಭಟ್ತರದ್ದು. ಆದರೆ ಇಲ್ಲಿ ಸೋನು ಹಲವಾರು ಕಡೆ ಉಚ್ಚಾರದಲ್ಲಿ ಎಡವಿದ್ದಾರೆ. ಅದೂ ಅಲ್ಲದೇ ಸಾಹಿತ್ರದಲ್ಲಿ ಬಳಸಿರುವ ಕೆಲವು ಪದಗಳು ಸಂಗೀತದೊಂದಿಗೆ ಅಷ್ಟಾಗಿ ಹೊಂದದೇ ಇರುವುದು ಗೊತ್ತಾಗುತ್ತದೆ.. ಹಿನ್ನೆಲೆ ಸಂಗೀತ ಮೊದಲ ಹಾಡಿನದ್ದೇ ಆಗಿರುವುದರಿಂದ ಕೇಳಲು ಬಹಳ ಇಂಪಾಗಿಯೇ ಇದೆ..

ಅಂಕ - 7/10


ಒಂದಂತೂ ಸತ್ಯ... ಮುಂಗಾರು ಮಳೆಯ ನಂತರ ಭಾರೀ ನಿರೀಕ್ಷೆಯಲ್ಲಿದ್ದ ಕೇಳುಗರಿಗೆ ಗಾಳಿಪಟಚಿತ್ರದ ಹಾಡುಗಳು ನಿರಾಸೆಯನ್ನಂತೂ ಖಂಡಿತಾ ಮಾಡುವುದಿಲ್ಲ. ಮುಂಗಾರು ಮಳೆ ಮುಂಗಾರು ಮಳೇಯೇ.. ಅದರೊಂದಿಗೆ ಹೋಲಿಸುವುದು ಬೇಡ... ಉತ್ತಮ ಸಂಗೀತ ಪ್ರಿಯರಿಗೆ ಇಲ್ಲಿ ಒಳ್ಳೆಯ ರಸದೌತಣವಂತೂ ಇದೆ.. ಸಾಹಿತ್ಯ ಪ್ರಿಯರಿಗೆ ಜಯಂತ್ ಸೊಗಸಾದ ಸಾಲುಗಳನ್ನು ಬರೆದಿದ್ದಾರೆ.. ಹರಿಕೃಷ್ಣ ಉತ್ತಮವಾಗಿ ಸಂಗೀತ ನೀಡಿದ್ದಾರೆ

GAALIPATA Song Rocking !

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲ್ಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ...?

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ


ನಾ ನಿನ್ನ ಕನಸಿಗೆ ಚಂದಾದಾರನು... ಚಂದಾ ಬಾಕಿ ನೀಡಲು ಬಂದೇ ಬರವೆನು
ನಾ ನೇರ ಹೃದಯದ ವರದಿಗಾರನು...ನಿನ್ನ ಕಂಡ ಕ್ಷಣದಲೇ ಮಾತೇ ಮರೆವೆನು
ಕ್ಷಮಿಸು ನೀ ಕಿನ್ನರೀ... ನುಡಿಸಲೇ ನಿನ್ನನು
ಹೇಳಿ ಕೇಳಿ ಮೊದಲೆ ಚೂರು ಪಾಪಿ ನಾನು....

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ

ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
ಕನ್ನ ಕೊರೆದು ದೋಚಿಕೊಂಡಾನೆನಪುಗಳಿಗೆ ಪಾಲುದಾರ
ನನ್ನ ಈ ವೇದನೆ... ನಿನಗೆ ನಾ ನೀಡೆನು
ಹೇಳಿ ಕೇಳಿ ಮೊದಲೆ ಚೂರು ಕಳ್ಳ ನಾನು

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲ್ಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ...?

Monday 20 August, 2007

ಮಳೆ ನಿಂತು ಹೋದ ಮೇಲೆ..

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ.. ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವುದು ಏನು ಉಳಿದು ಹೋಗಿದೆ.. ಹೇಳಲಿ ಹೇಗೆ ತಿಳಿಯದಾಗಿದೆ


ನೋವಿನಲ್ಲಿ ಜೀವ ಜೀವ ಅರಿತ ನಂತರ.. ನಲಿವು ಬೇರೆ ಏನಿದೆ ಏಕೆ ಅಂತರ
ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ ಒಂದೇ ಸಾರಿ ನೀ ಕೇಳೆಯಾ ಈ ಸ್ವರ
ಮನಸಲ್ಲಿ ಚೂರು ಜಾಗ ಬೇಕಿದೆ.. ಕೇಳಲಿ ಹೇಗೆ ತಿಳಿಯದಾಗಿದೆ
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ.. ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ

ಕಣ್ಣು ತೆರೆದು ಕಾಣುವ ಕನಸೇ ಜೀವನ.. ಸಣ್ಣ ಹಠವ ಮಾಡಿದೆ ಹೃದಯ ಈ ದಿನ
ಎದೆಯ ದೂರವಾಣಿಯ ಕರೆಯ ರಿಂಗಣ.. ಕೇಳು ಜೀವವೇ ಏತಕೀ ಕಂಪನ
ಹೃದಯವೂ ಇಲ್ಲಿ ಕಳೆದು ಹೋಗಿದೆ.. ಹುಡುಕಲೇ ಬೇಕೇ ತಿಳಿಯದಾಗಿದೆ
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ.. ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವುದು ಏನು ಉಳಿದು ಹೋಗಿದೆ.. ಹೇಳಲಿ ಹೇಗೆ ತಿಳಿಯದಾಗಿದೆ

Wednesday 15 August, 2007

ಚಿತ್ರ - ಮಿಲನ
ತಾರಾಗಣ - ಪುನೀತ್, ಪಾರ್ವತಿ, ಪೂಜಾ(ಸಂಜನಾ) ಗಾಂಧಿ
ನಿರ್ದೇಶನ- ಪ್ರಕಾಶ್
ಸಂಗೀತ - ಮನೋಮೂರ್ತಿ
ಸಾಹಿತ್ಯ - ಜಯಂತ್ ಕಾಯ್ಕಿಣಿ, ಕವಿರಾಜ್, ವಿ. ನಾಗೇಂದ್ರ ಪ್ರಸಾದ್
ಗಾಯಕರು - ರಾಜೇಶ್ ಕೃಷ್ಣನ್, ಸೋನು ನಿಗಮ್,ಕುಮಾರ್ ಗಾಂಜಾವಾಲ, ಚೈತ್ರಾ, ಶ್ರೇಯಾ ಗೋಶಲ್, ಸುರೇಶ್ ಪೀಟರ್


1. ನಿನ್ನಿಂದಲೇ, ನಿನ್ನಿಂದಲೇ ಕನಸೊಂದು ಶುರುವಾಗಿದೆ, ನಿನ್ನಿಂದಲೇ, ನಿನ್ನಿಂದಲೇ ಮನಸಿಂದು ಕುಣಿದಾಡಿದೆ...
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ, ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ, ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ.. ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ..
(ಸೋನು ನಿಗಂ) - ಜಯಂತ್ ಕಾಯ್ಕಿಣಿಯವರ ಸಾಹಿತ್ಯ ಬಲು ಸೊಗಸಾಗಿದೆ. ಈ ಹಾಡು ಸೂಪರ್ ಹಿಟ್ ಆಗುವ ಎಲ್ಲ ಲಕ್ಷಣಗಳಿವೆ... ಸೂಪರ್ ಸಾಂಗ್!!! 9/10

೨. ಮದರಂಗಿಯಲ್ಲಿ ಮನಸ್ಸಿನ ರಂಗು ಮೂಡಿದೆ.. ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ.. ಬನ್ನಿ ಕುಣಿಯೋಣ ಎಲ್ಲ, ಸೇರಿ ನಲಿಯೋಣ ಶುಭ ಕೋರಿ ಉಲ್ಲಾಸದಲ್ಲಿ ಈ ದಿನ,
ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜತೆಗೂಡಿ ಎಲ್ಲೆಲ್ಲೂ ತಳಿರು ತೋರಣ - (ಶ್ರೇಯಾ ಗೋಶಲ್) - ಇಂಪಾದ ಹಾಡು. ಕೇಳಲು ಹಿತವಾಗಿದೆ. 7/10

೩. ಕಿವಿಮಾತೊಂದು ಹೇಳಲೇ ನಾನಿಂದು.. ದಾರಿ ನಿಂತಾಗ ಸಾಗಲೇ ಬೇಕೆಂದು.. ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ, ನೀನು ನೀನಾಗಿ ಬಾಳಲೇ ಬೇಕಿಂದು..
ಹಸಿರಾಗಿದೆ ದೀಪವು ನಿನಗಾಗಿ, ನಸುನಗುತಲೆ ಸಾಗು ನೀ ಗೆಲುವಾಗಿ, ಹೊಸ ತಂಗಾಳಿ ಹೇಳಿದೆ ಮೆಲುವಾಗಿ, ಈ ಬಾಳುಂಟು ಬಾಳುವ ಸಲುವಾಗಿ (ಕುನಾಲ್ ಗಂಜಾವಾಲ) - ಸಾಹಿತ್ಯ ಸೂಪರ್..

ಜಯಂತ್ ಕಾಯ್ಕಿಣಿ ತಾನು ಅದ್ಭುತ ಗೀತರಹನಕಾರನೆಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸುತ್ತಾರೆ.. ಕುನಾಜ್ ಗಾಂಜಾವಾಲ ಕಂಥದಲ್ಲಿ ಹೊರಹೊಮ್ಮಿರುವ ಇದು ಕೂಡ ಉತ್ತಮ ಹಾಡು..
7.5/10

೪. ಮಳೆ ನಿಂತು ಹೋದ ಮೇಲೆ - ಶ್ರೇಯಾ ಗೋಶಲ್ ಈ ಹಾಡನ್ನು ಸೋನು ನಿಗಮ್ ಜೊತೆ ಒಮ್ಮೆ ಮತ್ತು ಒಬ್ಬಳೆ ಒಮ್ಮೆ ಹಾಡಿದ್ದು ಎರಡೂ ಬಾರಿಯೂ ಸೂಪರ್. ತುಂಬಾ ಮಧುರವಾದ ಹಾಡು.
9/10

೫. ಅಂತೂ ಇಂತೂ ಪ್ರೀತಿ ಬಂತು ಇಂದು ನವಿರಾದ ಮಳೆ ಬಿಲ್ಲಿನಂತೆ, ಅಂತೂ ಇಂತೂ ಪ್ರೀತಿ ಬಂತು ಒಂದು ಸೊಗಸಾದ ಸವಿ ಸೊಲ್ಲಿನಂತೆ. - ಉದಿತ್ ನಾರಾಯಣ್ ಮತ್ತು ಚಿತ್ರಾರವರ ಧ್ವನಿಯಲ್ಲಿ ಮೂಡಿರುವ ಇಂಪಾದ ಯುಗಳ ಗೀತೆ. Catchy Music..

8.5/10

೬. ಕದ್ದು ಕದ್ದು - (ಚೈತ್ರ, ಸುರೇಶ್ ಪೀಟರ್, ಪ್ರವೀಣ್ ದತ್ ಸ್ಟೀಫನ್ ) - ಐಟಂ ನಂಬರ್ ರೀತಿ ಇದ್ದು.. ಸಾಧಾರಣವಾದ ಹಾಡು. ಇಡೀ ಅಲ್ಭಂನಲ್ಲಿ ನನಗೆ ಅಷ್ಟಾಗಿ ಹಿಡಿಸದ ಹಾಡು ಇದೊಂದೇ..

5/10



My overall rating - 8/10

Friday 3 August, 2007

geleya audio review

ಗೆಳೆಯ
ತಾರಾಗಣ - ಪ್ರಜ್ವಲ್, ತರುಣ್
ಸಂಗೀತ - ಮನೋಮೂರ್ತಿ
ಸಾಹಿತ್ಯ - ಜಯಂತ್ ಕಾಯ್ಕಿಣಿ, ಕವಿರಾಜ್, ವಿ.ನಾಗೇಂದ್ರ ಪ್ರಸಾದ್
ನಿರ್ದೇಶನ - ಹರ್ಷ

೧. ಈ ಸಂಜೆ ಯಾಕಾಗಿದೆ.. ನೀನಿಲ್ಲದೇ (ಸೋನು ನಿಗಮ್) - ಭಾವಪೂರ್ಣಭರಿತ ಅರ್ಥಗರ್ಭಿತ ಹಾಡು.

೨. ನನ್ನ ಸ್ಟೈಲು ಬೇರೇನೇ (ರಾಜೇಶ್ ಕೃಷ್ಣನ್, ಇಂಚರ) - ಫಾಸ್ಟ್ ನಂಬರ್. ಸುಮಾರಾಗಿದೆ. ಕವಿರಾಜ್ ಬರೆದಿರೋ ಹಾಡು
೩. ಹುಡುಗಿ ಮಳೆಬಿಲ್ಲು - (ಕಾರ್ತೀಕ್, ಪ್ರಿಯಾ ಹಿಮೇಶ್) - ಜಯಂತ್ ಕಾಯ್ಕಿಣಿ ಬರೆದಿರುವ ಈ ಯುಗಳ ಗೀತೆಗೆ ಮನೋಮೂರ್ತಿಯವರು ತುಂಬ ಚೆನ್ನಾಗಿ ಸಂಗೀತ ಸಂಯೋಜಿಸಿದ್ದಾರೆ.

೪. ಕನಸಲ್ಲೇ ಮಾತಾಡುವೆ (ಶ್ರೇಯಾ ಗೋಶಲ್) - ಶ್ರೇಯಾ ಉತ್ತಮವಾಗಿ ಹಾಡಿದ್ದಾರೆ. One of my Fav. songs in this album. ಸಾಹಿತ್ಯವೂ ಸೂಪರ್!!

೫. ಪುಟಗಳ ನಡುವಿನ - (ಪ್ರವೀನ್ ದತ್ ಸ್ಟೀಫನ್) - ಕೇಳಲು ಭಾವಗೀತೆಯ ಮಾದರಿಯಲ್ಲಿದೆ. ಅಬ್ಬರದ ಹಿನ್ನೆಲೆ ವಾದ್ಯಗಳಿಂದ ಮುಕ್ತವಾದ ಈ ಹಾಡು ತುಂಬ ಉಳಿದ ಹಾಡುಗಳಿಗಿಂತ ಭಿನ್ನವಾಗಿದೆ..

೬. ಚಾಂಗು ಭಲಾ ಚಾಂಗುರೇ - (ಶಂಕರ್ ಮಹಾದೇವನ್) - ನಾಗೇಂದ್ರ ಪ್ರಸಾದ್ ಬರೆದಿರುವ ಈ ಹಾಡು ಐಟಂ ಸಾಂಗ್... ಬಾಲಿವುಡ್‍ನ ರಾಖೀ ಸಾವಂತ್ ಹೆಜ್ಜೆ ಹಾಕಿರುವ ಹಾಡು


ನನ್ನ ರೇಟಿಂಗ್ - 7/10

Saturday 28 July, 2007

One of my fav songs...

ಫಸ್ಟ್ ಟೈಂ ನಿನ್ನ ನೋಡಿದಾಗ ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು
ನೆಕ್ಸ್ಟ್ ಟೈಂ ನಿನ್ನ ನೋಡಿದಾಗ ಮನಸು ನನ್ನ ಬಿಟ್ಟು ನಿನ್ನ ಸೇರಿತು
ಎವರಿಟೈಂ ನಿನ್ನ ನಾ ನೋಡಿದಾಗ... ಮರ್ತೆನು ನನ್ನೆ ಮೆಲ್ಲ


ಸದ್ದೆ ಇಲ್ಲದೆ, ನಿದ್ದೆ ಇಲ್ಲದೆ ಒದ್ದಾಡೊ ಹಾಗೆ ಮಾಡಿದೆ
ಕದ್ದು ನೋಡಿದೆ, ಮುದ್ದು ಮಾಡಿದೆ ಎದ್ದಾಗ ಎಲ್ಲಿ ಓಡಿದೆ

ಸದ್ದೆ ಇಲ್ಲದೆ, ನಿದ್ದೆ ಇಲ್ಲದೆ ಒದ್ದಾಡೊ ಹಾಗೆ ಮಾಡಿದೆ
ಕದ್ದು ನೋಡಿದೆ, ಮುದ್ದು ಮಾಡಿದೆ ಎದ್ದಾಗ ಎಲ್ಲಿ ಓಡಿದೆ

ಕನ್ನಡಿ ಮುಂದೆ ನಾ ನಿಂತರೂನೂ, ಕಾಣುವೆ ನಂಗೆ ನೀನು. || ಫಸ್ಟ್ ಟೈಂ ||

ಎಲ್ಲೆ ಇದ್ದರೂ, ಎಲ್ಲೆ ಹೋದರೂ ಅಲ್ಲೆ ಬಂದು ಹಲ್ಲೆ ಮಾಡಿದೆ
ಸುಳ್ಳೆ ಆದರೂ, ಒಲ್ಲೆ ಎಂದರೂ ಲಲ್ಲೆ ಗರೆದು ಮಲ್ಲೆ ಮುಡಿಸಿದೆ

ಎಲ್ಲೆ ಇದ್ದರೂ, ಎಲ್ಲೆ ಹೋದರೂ ಅಲ್ಲೆ ಬಂದು ಹಲ್ಲೆ ಮಾಡಿದೆ
ಸುಳ್ಳೆ ಆದರೂ, ಒಲ್ಲೆ ಎಂದರೂ ಲಲ್ಲೆ ಗರೆದು ಮಲ್ಲೆ ಮುಡಿಸಿದೆ

ಕಂಡೆನೂ ನಿನ್ನನೇ ಟಿ.ವಿ.ಯಲ್ಲಿ... ಎಲ್ಲ ಚಾನೆಲ್ಲಿನಲ್ಲಿ... || ಫಸ್ಟ್ ಟೈಂ ||

Friday 27 July, 2007

ಮುದನೀಡುವ "ಮೀರಾ ಮಾಧವ ರಾಘವ"

ಕಿರುತೆರೆಯ ಜನಪ್ರಿಯ ನಿರ್ದೇಶಕ ಟಿ.ಎನ್.ಸೀತಾರಾಂ ನಿರ್ದೇಶನದ ಹಿರಿತೆರೆಯ ಚಿತ್ರ ಮೀರಾ ಮಾಧವ ರಾಘವ ನೋಡಲು ಇಂದು ಪಿ.ವಿ.ಆರ್ ಗೆ 4.20 ರ ಆಟಕ್ಕೆ ಹೋಗಿದ್ದೆ. ಚಿತ್ರಮಂದಿರ ಭಾಗಶಃ ತುಂಬಿತ್ತು. ಕಿರುತೆರೆಯ ಕೆಲವು ಕಲಾವಿದರೂ ಸಹ ಸಿನಿಮಾ ನೋಡಲು ಬಂದಿದ್ದರು.

ಚಿತ್ರ ಅತ್ಯದ್ಭುತವಲ್ಲದಿದ್ದರೂ ಒಂದು ಉತ್ತಮ ಸಾಂಸಾರಿಕ ಚಿತ್ರವಾಗಿ ಮೂಡಿಬಂದಿದೆ. ಮಧ್ಯಮ ವರ್ಗದ ಹೆಣ್ಣು ಮಗಳೊಬ್ಬಳ ಜೀವನದಲ್ಲಿ ನಡೆಯುವ ಸಂಘರ್ಷದ ಕಥೆಯನ್ನು ಸೀತಾರಾಂ ಸಮರ್ಥವಾಗಿ ನಿರೂಪಿಸಿದ್ದಾರೆ. ಕಥೆಯ ವಿಚಾರಕ್ಕೆ ಬರೋಣ. ಮೀರಾ-ಮಾಧವ-ರಾಘವ ಮೂರು ಪಾತ್ರಗಳು. ಮೀರಾ (ರಮ್ಯಾ) ಮಧ್ಯಮ ವರ್ಗದ ಹುಡುಗಿ. ಈಕೆ ಗಾಯಕಿ ಕೂಡ. ಈಕೆಯನ್ನು ರಾಘವ ಎಂಬ ಶ್ರೀಮಂತ ರೌಡಿ (ತಿಲಕ್) ಇಷ್ಟಪಡುತ್ತಾನೆ ಮತ್ತು ಮದುವೆಯಾಗುವಂತೆ ಪೀಡಿಸುತ್ತಾನೆ. ಆದರೆ ರೌಡಿಗೆ ಮಗಳನ್ನು ಕೊಡಲೊಪ್ಪದ ಮೀರಾಳ ಹೆತ್ತವರು ಆಕೆಯ ಮದುವೆಯನ್ನು ಮಾಧವನೆಂಬ (ದಿಗಂತ್) ಕಾಲೇಜು ಉಪನ್ಯಾಸಕನ ಜೊತೆ ನಡೆಸುತ್ತಾರೆ. ಬಡಕುಟುಂಬಕ್ಕೆ ಸೇರಿದ ಮಾಧವನಿಗೆ ಐ.ಎ.ಎಸ್. ಅಧಿಕಾರಿಯಾಗುವ ಆಸೆ. ಆದರೆ ಆರ್ಥಿಕವಾಗಿ ಸಶಕ್ತನಾಗಿರದ ಕಾರಣ ಆಸೆ ಆಸೆಯಾಗಿಯೇ ಉಳಿದಿರುತ್ತದೆ. ಹೀಗಿರುವಾಗ ಗಂಡನ ಐ.ಎ.ಎಸ್. ಆಸೆಯನ್ನು ಪೂರೈಸಲು ಬಯಸುವ ಮೀರಾ ಅನಿವಾರ್ಯ ಕಾರಣಗಳಿಂದ ರಾಘವನ ಬಳಿ ೧೦ ಲಕ್ಷ ಸಾಲ ಪಡೆಯುತ್ತಾಳೆ. ಸಾಲ ಮಾಡಲು ವಿರೋಧಿಯಾಗಿರುವ ಮಾಧವನಲ್ಲಿ ಈ ವಿಚಾರವನ್ನು ಮುಚ್ಚಿಡುತ್ತಾಳೆ. ಇಲ್ಲಿಂದ ಮೀರಾಳ ಬದುಕಿನಲ್ಲಿ ಮತ್ತೊಮ್ಮೆ ರಾಘವನ ಪ್ರವೇಶವಾಗುತ್ತದೆ. ಮೀರಾಳ ಸುಂದರ ಜೀವನದಲ್ಲಿ ಆತಂಕದ ಬಿರುಗಾಳಿಯೇಳುತ್ತದೆ. ತನ್ನ ಜೀವನದಲ್ಲಿ ತಲೆದೋರುವ ಈ ಸಂಕಟಗಳನ್ನು ಮೀರಾ ಹೇಗೆ ಎದುರಿಸುತ್ತಾಳೆ... ಮಾಧವನಿಗೆ ಸತ್ಯದ ಅರಿವಾದಾಗ ಹೇಗೆ ಪ್ರತಿಕ್ರಿಯಿಸುತ್ತಾನೆ... ಎಂಬುದನ್ನು ಸೀತಾರಾಂ ತಮ್ಮದೇ ಶೈಲಿಯಲ್ಲಿ ನಿರೂಪಿಸಿದ್ದಾರೆ.

ನಿರ್ದೇಶನದ ಜೊತೆಗೆ ಕಥೆ-ಚಿತ್ರಕಥೆ-ಸಂಭಾಷಣೆಗಳ ಜವಾಬ್ದಾರಿಯನ್ನೂ ಸೀತಾರಾಂರವರೇ ನಿಭಾಯಿಸಿದ್ದಾರೆ. ಸಂಭಾಷಣೆಯಲ್ಲಿ ಸೀತಾರಾಂ ಮಿಂಚಿದ್ದಾರೆ. ಚಿತ್ರಕಥೆ ಬಿಗುವಾಗಿದ್ದು ಎಲ್ಲಿಯೂ ಹಳಿತಪ್ಪದಂತೆ ಸೀತಾರಾಂ ಎಚ್ಚರವಹಿಸಿದ್ದಾರೆ. ಆದರೂ ಕೆಲವೊಂದು ಕಡೆಗಳಲ್ಲಿ ಸ್ವಲ್ಪ ಎಳೆದಂತೆ ಕಂಡುಬಂದು ಬೇಸರತರಿಸುತ್ತದೆ. ಹಾಸ್ಯದ ಸನ್ನಿವೇಶಗಳೇ ವಿರಳ.. ಇರುವ ಕಡೆಗಳಲ್ಲೂ ಹಾಸ್ಯ ಅಂತಹ ನಗುವನ್ನೇನೂ ತರಿಸುವುದಿಲ್ಲ. ಒಂದೆರಡು ಸನ್ನಿವೇಶಗಳು, ಸಂಭಾಷಣೆಗಳಲ್ಲಿ ಸೀತಾರಾಂ ಪ್ರಯತ್ನ ಸಾಲದು.ಇನ್ನಷ್ಟು ಉತ್ತಮವಾಗಿ ತೆಗೆಯಬಹುದಾಗಿತ್ತು ಎಂದು ಅನಿಸಿದರೆ ಆಶ್ಚರ್ಯವಿಲ್ಲ.

ತಮ್ಮ ಇಂಪಾದ ಸಂಗೀತ-ಸಾಹಿತ್ಯದಿಂದ ಹಂಸಲೇಖಾ ಚಿತ್ರಕ್ಕೆ ಇನ್ನಷ್ಟು ಮೆರುಗನ್ನು ಕೊಟ್ಟಿದ್ದಾರೆ. ಹಾಡುಗಳ ಚಿತ್ರೀಕರಣವೂ ಪರವಾಗಿಲ್ಲ. ಹಿನ್ನೆಲೆ ಗಾಯಕಿಯರು ನಿಜವಾಗಿಯೂ ಉತ್ತಮವಾಗಿ ಹಾಡಿದ್ದಾರೆ.

ಅಭಿನಯದಲ್ಲಿ ರಮ್ಯಾ ಮಿಂಚಿದ್ದಾರೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ರಮ್ಯಾ ಸಮರ್ಥವಾಗಿ ಅಭಿನಯಿಸಿದ್ದಾರೆ. ದಿಗಂತ್ ಅಭಿನಯದಲ್ಲಿ ಇನ್ನೂ ಪಳಗಬೇಕು. ಸಹ ಕಲಾವಿದರಾದ ಸುಧಾ ಬೆಳವಾಡಿ, ಸೀತಾ ಕೋಟೆ, ಮಾಸ್ಟರ್ ಆನಂದ್, ಹರಿಣಿ, ಮಂಡ್ಯ ರಮೇಶ್, ಜಯಶ್ರೀ ಎಲ್ಲರೂ ತಮಗಿರುವ ಅಲ್ಪಾವಕಾಶದಲ್ಲಿಯೇ ಸಹಜವಾಗಿ ನಟಿಸಿ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯವೊದಗಿಸಿದ್ದಾರೆ. ಬಹುತೇಕ ಎಲ್ಲರೂ ಕಿರುತೆರೆಯ ಕಲಾವಿದರುಗಳೆ ಅಭಿನಯಿಸಿರುವುದು ಇನ್ನೊಂದು ವಿಶೇಷ. ಆದರೆ ಚಿತ್ರದ ನಿಜವಾದ ನಾಯಕ ನಮ್ಮ ರಾಘವನೆಂದರೆ ತಪ್ಪಾಗಲಾರದು. ತಿಲಕ್ ಅಭಿನಯದ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆಯೇ. ಖಳನಾಯಕನಾಗಿದ್ದರೂ ಚಿತ್ರದ ಅಂತ್ಯದಲ್ಲಿ ನಿಮಗೆ ಇಷ್ಟವಾಗುವುದು ರಾಘವನೇ ಹೊರತು ಮಾಧವನಲ್ಲ. ತಮ್ಮ ಹಾವ ಭಾವ, ಸಂಭಾಷಣೆಯೊನ್ನೊಪ್ಪಿಸುವ ರೀತಿಗಳಿಂದ ಇಡೀ ಚಿತ್ರವನ್ನು ಆವರಿಸಿ ಬಿಡುತ್ತಾರೆ.. ಮೀರಾ ರಾಘವನಿಗೇ ಸಿಗಬಾರದಿತ್ತೇ ಎಂಬಷ್ಟರ ಮಟ್ಟಿಗೆ ರಾಘವನ ಪಾತ್ರ ಆಪ್ತವಾಗಿಬಿಡುತ್ತದೆ. HATS OFF TILAK. ಕನ್ನಡಕ್ಕೆ ಮತ್ತೊಬ್ಬ ಯೋಗ್ಯ ನಟನ ಸೇರ್ಪಡೆಯಾಗಿದೆ.


ಒಟ್ಟಿನಲ್ಲಿ ಇದೊಂದು ಸದಭಿರುಚಿಯ, ಯಾವುದೇ ಅಶ್ಲೀಲತೆ, ಹಿಂಸೆ, ರಕ್ತಪಾತಗಳಿಲ್ಲದ ಸುಂದರ ಸಾಂಸಾರಿಕ ಚಿತ್ರ. ಆದರೆ ಇದನ್ನು ಗೆಲ್ಲಿಸಬೇಕಾದರೆ ಮನೆಗಳಲ್ಲಿ ದೈನಂದಿನ ಧಾರಾವಾಹಿಗಳಿಗೆ ಅಂಟಿಕೊಂಡಿರುವ ಮಹಿಳಾ ಮಣಿಗಳು ಮತ್ತು ಕುಟುಂಬಗಳು ಥಿಯೇಟರ್ ಕಡೆಗೆ ಪಯಣಿಸಬೇಕು. ಮಾಸ್ ಚಿತ್ರಪ್ರಿಯರಿಗೆ ಚಿತ್ರ ಇಷ್ಟವಾಗದೇ ಇರಬಹುದು. ಆದರೂ ಇದು ನಮ್ಮ ಚಿತ್ರ. ಕಲಾವಿದರೆಲ್ಲರೂ ನಮ್ಮವರು. ಇಂತಹ ಚಿತ್ರ ಗೆಲ್ಲಬೇಕು. ಗೆಲ್ಲಿಸುವ ಹೊಣೆ ನಮ್ಮೆಲ್ಲ ಕನ್ನಡಿಗರದ್ದು.

Wednesday 18 July, 2007

ಮೀರಾ ಮಾಧವ ರಾಘವ ಹಾಡುಗಳು

ಟಿ. ಎನ್. ಸೀತಾರಾಂ ನಿರ್ದೇಶನದ ಬಹು ನಿರೀಕ್ಷಿತ ಮೀರಾ ಮಾಧವ ರಾಘವ ಚಿತ್ರದ ಹಾಡುಗಳು ಹಂಸಲೇಖರವರ ಸಾರಥ್ಯದಲ್ಲಿ ಸೊಗಸಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಎಲ್ಲವನ್ನೂ ಕನ್ನಡಿಗರೇ ಹಾಡಿರುವುದು ವಿಶೇಷ.

೧.
ವಸಂತ ವಸಂತ (ರಾಜೇಶ್ ಕೃಷ್ಣನ್, ಅನುರಾಧಾ ಭಟ್ (ಎದೆ ತುಂಬಿ ಹಾಡುವೆನು ಗಾಯಕಿ!!!) ) : ಇದು ತುಂಬ ಮೆಲೋಡಿಯಸ್ ಹಾಡು. ಕಿವಿಗೆ ಬಹಳ ಇಂಪನ್ನು ಕೊಡುತ್ತದೆ. ನನ್ನ ಫೇವರಿಟ್

೨.
ಒಳ್ಳೆ ಟೈಂ ಬಂತಮ್ಮ
(ಹೇಮಂತ್, ಸುಪ್ರಿಯಾ ಆಚಾರ್ಯ, ಇಂದು ನಾಗರಾಜ್ ಲಕ್ಷ್ಮಿ ನಾರಾಜ್ (ಎದೆ ತುಂಬಿ ಹಾಡುವೆನು ಗಾಯಕಿಯರು ಕಂ ಸೋದರಿಯರು. !!!) ) - ಇದೊಂದು ಚೌ ಚೌ ಹಾಡು. ಅನೇಕ ಜನಪ್ರಿಯ ಹಳೆಯ ಚಿತ್ರಗೀತೆಗಳ ರೀಮಿಕ್ಸ್ ಆಗಿರೋದ್ರಿಂದ ಕೇಲಲು ಸೊಗಸಾಗಿದೆ.

೩. ನಿನ್ನ ನೆನಪೆ - (ಸುಪ್ರಿಯಾ ಆಚಾರ್ಯ, ಫಯಾಜ್ ಖಾನ್) - ಶಾಸ್ತ್ರೀಯ ಸಂಗೀತ ಶೈಲಿಯ ಹಾಡು. ಸಾಹಿತ್ಯ, ಸಂಗೀತ ಎರಡರಲ್ಲೊ ಹಂಸಲೇಖ ಮಿಂಚಿದ್ದಾರೆ. ಉತ್ತಮ ಹಾಡು.

೪.
ಬೆಳ್ಳುಳ್ಳವ್ವ ಬೆಳ್ಳುಳ್ಳಿ
- (ಚೈತ್ರಾ) - ಲಯ ಪ್ರಧಾನ ಹಾಡು. ಚೈತ್ರ ಚೆನ್ನಾಗಿ ಹಾಡಿದ್ದಾರೆ. ಐಟಂ ನಂಬರ್ ಥರ ಇದೆ!!! ಟಿ.ಎನ್. ಸೀತಾರಾಂ ಇರನ್ನು ಹೇಗೆ ಚಿತ್ರೀಕರಿಸಿದ್ದಾರೆ ಅನ್ನೋದನ್ನು ನೋಡಬೇಕು.

೫.
ಭೂಮಿ ಬಾನು
- (ಅನುರಾಧಾ ಭಟ್) - ಬಹಳ ಇಂಪಾದ ಗೀತೆ.ನನ್ನ ಎರಡನೇ ಫೇವರಿಟ್

೬.
ರಾಧೆಯ ನೋಡಲು ಬಂದೆ
- (ಹರ್ಷ, ಅನುರಾಧಾ ಭಟ್) - ನಾಯಕಿ ನಾಯಕನಿಗೆ ಸಂಗೀತ ಹೇಳಿಕೊಡುವ ಚಿಕ್ಕ ಹಾಡು.


ನನ್ನ ಒಟ್ಟು ಅಂಕ - 4/5

ಎದೆ ತುಂಬಿ ಹಾಡುವೆನು ಟಿ.ವಿ. ಕಾರ್ಯಕ್ರಮದಲ್ಲಿ ಹೊರಹೊಮ್ಮಿದ ಮಂಗಳೂರಿನ ಅನುರಾಧಾ ಭಟ್, ಮೈಸೂರಿನ ಸೋದರಿಯರಾದ ಇಂದು ನಾಗರಾಜ್ ಮತ್ತು ಲಕ್ಷ್ಮಿ ನಾಗರಾಜ್ ಅವರುಗಳಿಗೆ ಹಾಡಲು ಅವಕಾಶ ಕೊಟ್ಟ ಹಂಸಲೇಖ ಕ್ರಮ ಶ್ಲಾಘನೀಯ.

Monday 16 July, 2007

ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!

ನಮ್ಮನೆ ಮಗುವಿಗೆ ನಾಮಕರಣ ಮಾಡಲು ಪಕ್ಕದ ಮನೆಯವರ ಒಪ್ಪಿಗೆ ಬೇಕಂತೆ!... ಮಹಾರಾಷ್ಟ್ರ ಮತ್ತು ಎಂ.ಇ.ಎಸ್ ನ ಹೊಸ ತಗಾದೆ ಇದು. ಅಲ್ಲ ಸ್ವಾಮಿ, ಬೆಳಗಾಲಿಯೇನು ಮಹಾರಾಷ್ಟ್ರದಲ್ಲಿದೆಯೋ ಅಥವ ಕರ್ನಾಟಕದಲ್ಲೋ ಎಂಬ ಸಂಶಯ ಬರುತ್ತೆ ಇವರ ಮಾತು ಕೇಳಿದರೆ. ಕನ್ನಡದ ನೀರು, ಗಾಳಿ ಬೆಳಕು ಸೇವಿಸಲು ಬೇಕು.. ಆದರೆ ಕನ್ನಡ ಬೇಡ.. ಕರ್ನಾಟಕ ಬೇಡ.. ಇದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂ.ಇ.ಎಸ್) ಎಂಬ ಸಂಸ್ಥೆಯ ನಿಲುವು. ಹಾಳಾಗಿ ಹೋಗಲಿ, ಅವರ ಮನೋಭಾವ ಅವರ ಬಳಿ ಇರಲಿ ಅಂತ ಸುಮ್ಮನೆ ಇರೋಕೂ ಬಿಡೋಲ್ಲ.. ಬೆಳಗಾಂ ಅನ್ನು ಬೆಳಗಾವಿ ಎಂದು ಕನ್ನಡತನ್ನಕ್ಕೆ ಒಪ್ಪುವಂತೆ ಸರ್ಕಾರ ನಾಮಕರಣ ಮಾಡಿದರೆ ಅದಕ್ಕೂ ತಕರಾರು... ಮಹಾರಾಷ್ಟ್ರ ಸರ್ಕಾರದ ಬೆಂಬಲೆ ಬೇರೆ ಇವರಿಗೆ... ನನ್ನ ನೆಲದಲ್ಲಿ ನಾವು ವಿಧಾನ ಸೌಧ ನಿರ್ಮಿಸೋದಕ್ಕೆ ಇವರ ವಿರೋಧ... ಸರ್ವೋಚ್ಛ ನ್ಯಾಯಾಲಯಕ್ಕೆ ದೂರು.... ಇದು ಉದ್ಧಟತನದ ಪರಮಾವಧಿಯಲ್ಲದೇ ಮತ್ತಿನ್ನೇನು? ನಾವೇನು ಅವರ ಸಾಂಗ್ಲಿಯಲ್ಲೋ, ಪುಣೆಯಲ್ಲೋ ವಿಧಾನ ಸೌಧ ನಿರ್ಮಿಸುತ್ತಿಲ್ಲವಲ್ಲಾ... ಅವರ ಕೊಲ್ಹಾಪುರವನ್ನೇನೂ ಮರು ನಾಮಕರಣ ಮಾಡ್ತಾ ಇಲ್ವಲ್ಲಾ.. ನಮ್ಮ ನೆಲದಲ್ಲಿ ನಾವು ಮಾಡೊ ಕಾಯಕಗಳನ್ನು ಪ್ರಶ್ನಿಸಲು, ವಿರೋಧಿಸಲು ಅವರು ಯಾರು!. ಕಾರವಾರ, ಸೂಪಾ ತಮಗೆ ಬೇಕು ಅಂತ ಗೋವಾನೂ ಕೂಗ್ತಾ ಇದೆ. ಶಾಂತ ಪ್ರಿಯರು ಎಂದ ಮಾತ್ರಕ್ಕೆ ಕನ್ನಡಿಗರ ಮೇಲೆ, ಕರ್ನಾಟಕದ ಮೇಲೆ ಏನು ಬೇಕಾದರೂ ಮಾಡಬಹುದು ಎಂಬ ಧೋರಣೆ ಇವರುಗಳದ್ದು. ನಮ್ಮ ಮೌನವನ್ನು ಬಲಹೀನತೆಯೆಂಸು ತಪ್ಪಾಗಿ ಅರ್ಥೈಸುತ್ತಿರೋ ಹಾಗಿದೆ ಇವರೆಲ್ಲ.. ಕನ್ನಡಿಗನಾಗಿ ಮಹಾರಾಷ್ಟ್ರ, ಎಂ.ಇ.ಎಸ್ ನ ಈ ಧೋರಣೆಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಧಿಕ್ಕಾರವಿರಲಿ ಇವರುಗಳ ಈ ಆಷಾಢಭೂತಿತನಕ್ಕೆ!.

Friday 13 July, 2007

ಪುಟ್ಟಣ್ಣ ಕಣಗಾಲ್ ಚಿತ್ರಗಳು

ಪುಟ್ಟಣ್ಣ ಕಣಗಾಲ್ (೧ ಡಿಸೆಂಬರ್ ೧೯೩೩ - ೫ ಜೂನ್ ೧೯೮೫) ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕರು. ಕನ್ನಡ ಚಿತ್ರರಂಗದಲ್ಲಿ ಮಹೋನ್ನತ ಚಿತ್ರಗಳನ್ನು ನಿರ್ದೇಶಿಸಿ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ಬೆರಗಾಗಿ ನೋಡುವಂತೆ ಮಾಡಿದ ಮೇಧಾವಿ.

ಪುಟ್ಟಣ್ಣನವರ ಒಂದೊಂದು ಚಿತ್ರವೂ ಒಂದೊಂದು ಅನರ್ಘ್ಯ ರತ್ನವಿದ್ದಂತೆ.

ಪುಟ್ಟಣ್ಣನವರ ನಿರ್ದೇಶನದ ಚಿತ್ರಗಳನ್ನು ಮತ್ತೊಮ್ಮೆ ನೆನೆದು ಹೆಮ್ಮೆ ಪಡೋಣ........

ಕನ್ನಡ ಚಿತ್ರಗಳು

0 - ಬೆಟ್ಟದ ಹಾದಿ (ಬಿಡುಗಡೆಯಾಗಿಲ್ಲ)
1 ಬೆಳ್ಳಿಮೋಡ - (1966 - ಕಲ್ಪನಾ, ಕಲ್ಯಾಣ್ ಕುಮಾರ್)
2 ಮಲ್ಲಮ್ಮನ ಪವಾಡ (1969 - ಡಾ.ರಾಜ್ ಕುಮಾರ್, ಬಿ.ಸರೋಜಾ ದೇವಿ)
3 ಕಪ್ಪು ಬಿಳುಪು (1969 - ಕಲ್ಪನಾ)
4 ಗೆಜ್ಜೆ ಪೂಜೆ (1969 - (ಕಲ್ಪನಾ, ಗಂಗಾಧರ್, ಲೀಲಾವತಿ)
5 ಕರುಳಿನ ಕರೆ (1970 - ಡಾ.ರಾಜ್ ಕುಮಾರ್, ಕಲ್ಪನಾ)
6 ಸಾಕ್ಷಾತ್ಕಾರ (1971 - ಡಾ.ರಾಜ್ ಕುಮಾರ್, ಜಮುನ, ಪೃಥ್ವಿ ರಾಜ್ ಕಪೂರ್)
7 ಶರಪಂಜರ (1971 - ಕಲ್ಪನಾ, ಗಂಗಾಧರ್)
8 ನಾಗರ ಹಾವು (1972 - ವಿಷ್ಣುವರ್ಧನ್, ಆರತಿ, ಕೆ.ಎಸ್.ಅಶ್ವಥ್, ಜಯಂತಿ)
9 ಎಡಕಲ್ಲು ಗುಡ್ಡದ ಮೇಲೆ (1973 - ಜಯಂತಿ, ಆರತಿ, ಚಂದ್ರಶೇಖರ್)
10 ಉಪಾಸನೆ(1974 - ಆರತಿ, ಸೀತಾರಾಂ)
11 ಕಥಾ ಸಂಗಮ (1975 - ರಜನೀಕಾಂತ್, ಆರತಿ, ಬಿ.ಸರೋಜಾ ದೇವಿ)
12 ಶುಭ ಮಂಗಳ(1975 - ಶ್ರೀನಾಥ್, ಆರತಿ, ಅಂಬರೀಶ್, ಶಿವರಾಂ)
13 ಬಿಳಿ ಹೆಂಡ್ತಿ (1975 - ಆರತಿ, ಅನಿಲ್ ಕುಮಾರ್)
14 ಫಲಿತಾಂಶ(1976 -ಆರತಿ, ಜೈ ಜಗದೀಶ್)
15 ಕಾಲೇಜು ರಂಗ (1976 - ಕಲ್ಯಾಣ್ ಕುಮಾರ್, ಜಯಸಿಂಹ, ಲೋಕನಾಥ್, ಲೀಲಾವತಿ)
16 ಪಡುವಾರ ಹಳ್ಳಿ ಪಾಂಡವರು (1978 - ಅಂಬರೀಶ್, ಜೈ ಜಗದೀಶ್, ರಾಮಕೃಷ್ಣ, ಆರತಿ)
17 ಧರ್ಮಸೆರೆ (1979 - ಶ್ರೀನಾಥ್, ಆರತಿ)
18 ರಂಗನಾಯಕಿ (1981 - ಆರತಿ, ಅಶೋಕ್, ರಾಮಕೃಷ್ಣ, ಅಂಬರೀಶ್, ರಾಜಾನಂದ್)
19 ಮಾನಸ ಸರೋವರ (1983 - ಶ್ರೀನಾಥ್, ರಾಮಕೃಷ್ಣ, ಪದ್ಮಾವಾಸಂತಿ)
20 ಧರಣಿ ಮಂಡಲ ಮಧ್ಯದೊಳಗೆ (1983 - ಶ್ರೀನಾಥ್, ಚಂದ್ರಶೇಖರ್, ರಾಮಕೃಷ್ಣ, ಟಿ.ಎನ್.ಸೀತಾರಾಂ)
21 ಅಮೃತ ಘಳಿಗೆ (1984 - ಶ್ರೀಧರ್, ಪದ್ಮಾವಾಸಂತಿ, ರಾಮಕೃಷ್ಣ)
22 ಋಣ ಮುಕ್ತಳು(1984 - ಭಾರತಿ, ಎಸ್.ಕೆ.ಅರಸ್,ರಾಮಕೃಷ್ಣ)
23 ಮಸಣದ ಹೂವು (1984 - ಅಂಬರೀಶ್, ಜಯಂತಿ, ಅಪರ್ಣಾ)
24 ಸಾವಿರ ಮೆಟ್ಟಿಲು (1967/2006 - ಕಲ್ಯಾಣ್ ಕುಮಾರ್, ವಜ್ರಮುನಿ, ಜಯಂತಿ, ಪಂಡರಿ ಬಾಯಿ, ಅಂಬರೀಶ್, ಅನು ಪ್ರಭಾಕರ್, ರಾಮಕೃಷ್ಣ, ಸುಂದರ್ ರಾಜ್, ಮಾ.ಹಿರಣ್ಣಯ್ಯ)

(1967 ರಲ್ಲಿ ಆರಂಭಗೊಂಡು ಅರ್ಧಕ್ಕೇ ನಿಂತಿದ್ದ ಚಿತ್ರವನ್ನು 38 ವರ್ಷಗಳ ನಂತರ ಅಂದರೆ, 2006ರಲ್ಲಿ ಕೆ.ಎಸ್.ಎಲ್.ಸ್ವಾಮಿ ಅವರಿಂದ ಪೂರ್ಣಗೊಳಿಸಿದರು)


ಹಿಂದಿ ಚಿತ್ರಗಳು 1. ಝಹ್ರೀಲಾ ಇನ್ಸಾನ್ (1974 - ರಿಶಿ ಕಪೂರ್, ನೀತು ಸಿಂಗ್; ನಾಗರ ಹಾವು ಚಿತ್ರದ ರೀಮೇಕ್)
2. ಹಂ ಪಾಂಚ್ (1981 - ಮಿಥುನ್ ಚಕ್ರವರ್ತಿ; ಪಡುವಾರಹಳ್ಳಿ ಪಾಂಡವರು ಚಿತ್ರದ ರೀಮೇಕ್)

ತಮಿಳು ಚಿತ್ರಗಳು1. ಇರುಲುಂ ಒಲಿಯಂ
2. ಟೀಚರಮ್ಮಾ ತೇವಿಡಿಯಾ
3. ಸುದರುಂ ಸೂರವಲಿಯುಂ

ಮಲಯಾಳಂ ಚಿತ್ರ1. ಪೂಚಿ ಕಣ್ಣೇ (1966 - ಪುಟ್ಟಣ್ಣನವರ ವೃತ್ತಿ ಜೀವನದ ಮೊದಲ ಚಿತ್ರ!!! .ಇದು ತ್ರಿವೇಣಿಯವರ ಕನ್ನಡ ಕಾದಂಬರಿ "ಬೆಕ್ಕಿನ ಕಣ್ಣು" ಆಧಾರಿತ.)

Sunday 1 July, 2007

ಕನ್ನಡದ ಹೆಸರಲ್ಲಿ ಇಂಗ್ಲೀಷ್ ಕಲಿಕೆ... ಮಾನ್ಯತೆ ರದ್ದು! ಈ ಪರಿಸ್ಥಿತಿಗೆ ಯಾರು ಹೊಣೆ?

ಕಳೆದ ಕೆಲವು ದಿನಗಳಿಂದ ಯಾವ ಪತ್ರಿಕೆಯನ್ನು ನೋಡಿದರೂ ಇದೇ ಸುದ್ದಿ - ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡುವುದಾಗಿ ಸರ್ಕಾರದಿಂದ ಅನುಮತಿ ಪಡೆದ ರಾಜ್ಯದ ಸಾವಿರಾರು ಶಾಲೆಗಳು ಇಂಗ್ಲೀಷ್ ಮಾಧ್ಯಮದಲ್ಲಿ ಬೋಧಿಸುವ ಮೂಲಕ ವಿವಾದದ ಮೂಲಬಿಂದುಗಳಾದದ್ದು; ಸರ್ಕಾರ ಮತ್ತು ಇಂತಹ ಶಾಲೆಗಳ ಆಡಳಿತ ಮಂಡಳಿಗಳ ನಡುವಣ ಕಾನೂನು ಸಮರ; ಭಾಷಾ ನೀತಿ ಉಲ್ಲಂಘನೆ ಮಾಡಿದ ತಪ್ಪಿಗೆ ಸರ್ಕಾರದಿಂದ ಇಂತಹ ಶಾಲೆಗಳ ಮಾನ್ಯತೆ ರದ್ದು; ಸರ್ಕಾರದ ಈ ನಿರ್ಧಾರವನ್ನು ಎತ್ತಿ ಹಿಡಿದ ರಾಜ್ಯದ ಉಚ್ಚ ನ್ಯಾಯಾಲಯ; ಕನ್ನಡದಲ್ಲಿಯೇ ಬೋಧಿಸುವುದಾಗಿ ಪ್ರಮಾಣ ಪತ್ರ ಸಲ್ಲಿಸಿದರೆ ಉಳಿಗಾಲ ಇಲ್ಲವಾದರೆ ಶಾಶ್ವತವಾಗಿ ಮಾನ್ಯತೆ ರದ್ದು ಎಂಬ ಮಹತ್ವದ ತೀರ್ಪು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗೆ ಒಮ್ಮೊಮ್ಮೆ ಅನಿಸುತ್ತದೆ; ಯಾಕೆ ಹೀಗೆಲ್ಲಾ ಆಯಿತು. ಸಮಸ್ಯೆಯ ಮೂಲ ಕಾರಣವೇನು. ಯಾರದೋ ತಪ್ಪಿಗೆ ಈಗ ಅಮಾಯಕ ಪುಟಾಣಿಗಳು ಶಿಕ್ಷೆ ಅನುಭವಿಸಬೇಕೇ ಎಂದು.

ಈ ಎಲ್ಲಾ ಸಮಸ್ಯೆಗಳಿಗೆ ಯಾರು ಹೊಣೆ?

ಆಂಗ್ಲ ಮಾಧ್ಯಮದಲ್ಲಿ ಬೋಧಿಸಿದರೆ ಪೋಷಕರಿಂದ ಹೆಚ್ಚಿನ ಹಣ ಕಿತ್ತುಕೊಳ್ಳಬಹುದೆಂಬ ದುರಾಸೆಗೆ ಬಿದ್ದ ಶಾಲಾ ಆಡಳಿತ ಮಂಡಳಿಯವರೇ?
ಹತ್ತಾರು ವರ್ಷಗಳಿಂದಲೇ ಅವ್ಯಾಹತವಾಗಿ ನಡೆಯುತ್ತಿದ್ದ ಭಾಷಾ ನೀತಿಯ ಉಲ್ಲಂಘನೆಯನ್ನು ಹಣದ ಆಮಿಷಕ್ಕೊಳಗಾಗಿಯೋ ಅಥವಾ ದಿವ್ಯ ನಿರ್ಲಕ್ಷದಿಂದಲೋ ಕಡೆಗಣಿಸಿ ಸುಮ್ಮನೇ ಕುಳಿತ ಕ್ಷೇತ್ರ ಶಿಕ್ಷಣಾಧಿಕಾರಿಗಳೇ?
ಇವೆಲ್ಲಾ ಗೊತ್ತಿದ್ದೂ ಜಾಣ ಕಿವುಡರಂತೆ ವರ್ತಿಸುತ್ತಿದ್ದ ರಾಜಕಾರಣಿಗಳೇ?
ಇಷ್ಟು ವರ್ಷಗಳ ಕಾಲ ಏನೇನೂ ಕ್ರಮ ಕೈಗೊಳ್ಳದೇ ಈಗ ಧಿಡೀರನೆ ಭೀಕರ ಕಾನೂನು ಸಮರಕ್ಕಿಳಿದ ಸರ್ಕಾರವೇ?
ಆಂಗ್ಲ ಮಾಧ್ಯಮದಲ್ಲಿ ಓದಿದರೇನೇ ಹೆಚ್ಚು ಪ್ರತಿಷ್ಠೆ ಹಾಗೂ ಅನುಕೂಲ, ಕನ್ನಡಮಾಧ್ಯಮದಲ್ಲಿ ಕಲಿಯುವುದು ಅವಮಾನ, ನಿಷ್ಪ್ರಯೋಜಕವೆಂದು ತಿಳಿದು ಡೊನೇಷನ್ ಎಷ್ಟಾದರೂ ಸರಿ ಕಲಿಸಿದರೆ ಆಂಗ್ಲ ಮಾಧ್ಯಮದಲ್ಲೇ ಕಲಿಸಬೇಕೆಂದು ಪಟ್ಟು ಹಿಡಿಯುವ ಪೋಷಕವರ್ಗವೇ?
ಕನ್ನಡ ಮಾಧ್ಯಮ ಶಾಲೆಗಳ ಅದರಲ್ಲೂ ಸರ್ಕಾರೀ ಕನ್ನಡ ಶಾಲೆಗಳ ಗುಣಮಟ್ಟದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೇ ಅವುಗಳನ್ನು ದೊಡ್ಡಿಗಳ ಮಟ್ಟಕ್ಕೆ ತಂದಿರುವ ಸರ್ಕಾರವೇ?
ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ದುಬಾರಿ ಆಂಗ್ಲ ಶಾಲೆಗಳಿಗೆ ಕಳುಹಿಸಿ ಹೊರಗಿನಿಂದ ಕನ್ನಡವೇ ಬೇಕು, ಕನ್ನಡವೇ ಸರ್ವಸ್ವವೆಂದು ಒಣ ಭಾಷಣ ಬಿಗಿದು ಉರಿಯುವ ಬೆಂಕಿಕೆ ಇನ್ನಷ್ಟು ತುಪ್ಪ ಸುರಿಯುವ "ಬುದ್ಧಿ ಜೀವಿ"ಗಳೇ?

ಪರಿಹಾರವಿದೆಯೇ?

ಇದು ಚಿಂತನಾರ್ಹ ವಿಷಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆಯ ಜ್ಞಾನ ಅವಶ್ಯಕವೆಂಬುದರಲ್ಲಿ ಎರಡು ಮಾತಿಲ್ಲ. ಸರ್ಕಾರವು ಒಂದನೇಯ ತರಗತಿಯಿಂದಲೇ ಕನ್ನಡ ಮಾಧ್ಯಮ ಶಾಲೆಗಳಲ್ಲೂ ಇಂಗ್ಲೀಷನ್ನು ಒಂದು ವಿಷಯವಾಗಿ ಬೋಧಿಸುವ ನಿರ್ಧಾರಕ್ಕೆ ಬಂದದ್ದು ಶ್ಲಾಘನಾರ್ಹ. ಆದರೆ ಇದೊಂದೇ ಸಾಲದು. ಕನ್ನಡ ಮಾಧ್ಯಮ ಶಾಲೆಗಳ ಅದರಲ್ಲೂ ಸರ್ಕಾರೀ ಶಾಲೆಗಳ ಮೂಲಭೂತ ಸೌಕರ್ಯಗಳ, ಕಲಿಕಾ ಗುಣಮಟ್ಟದ ಸುಧಾರಣೆಯಾಗಬೇಕು. ಖಾಸಗೀ ಆಂಗ್ಲ ಮಾಧ್ಯಮದ ಶಾಲೆಗಳಿಗೆ ತಾವೇನೂ ಕಡಿಮೆಯಿಲ್ಲ. ಅಲ್ಲಿ ಸಿಗುವ ಎಲ್ಲ ಉತ್ಕೃಷ್ಠ ಗುಣಮಟ್ಟದ ಶಿಕ್ಷಣ ಸರ್ಕಾರೀ ಶಾಲೆಗಳಲ್ಲೂ ಲಭ್ಯವೆಂಬುದನ್ನು ಪೋಷಕರಿಗೆ ಮನದಟ್ಟಾಗುವಂತೆ ಶಾಲೆಗಳ ಅಭಿವೃದ್ಧಿಯಾಗಬೇಕಿದೆ. ಹಾಗಾದಾಗ ಕೇವಲ ಕೆವವೊಂದೇ ಶಾಲೆಗಳಿಗೆ ಅಂಟಿಕೊಂಡಿರುವ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಲು ಹಿಂಜರಿಯುವುದಿಲ್ಲ. ಇದರಿಂದ ದುಬಾರಿ ಡೊನೇಷನ್ ಹಾವಳಿಯನ್ನೂ ತಪ್ಪಿಸಬಹುದು. ಅಲ್ಲದೇ ಗುಣಮಟ್ಟದ ಶಿಕ್ಷಣದ ಹೆಸರಲ್ಲಿ ಹೆಚ್ಚಿಗೆ ಹಣವನ್ನು ಕಿತ್ತುಕೊಳ್ಳುವ ಧನ ದಾಹೀ ಆಡಳಿತ ಮಂಡಳಿಯವರಿಗೂ ಕಡಿವಾಣಹಾಕಬಹುದು. ಎಲ್ಲಿ ಬೇಡಿಕೆ ಕುಸಿಯುತ್ತದೋ, ಆವಾಗ ತನ್ನಿಂತಾನೇ ಭಾಷಾ ನೀತಿಯ ಪಾಲನೆಯೂ ಆಗುತ್ತದೆ.

ನನ್ನ ಪ್ರಕಾರ ಪ್ರಸಕ್ತ ಸಮಸ್ಯೆಗೆ ಸರ್ಕಾರ, ಪೋಷಕರು, ಶಿಕ್ಷಣಾಧಿಕಾರಿಗಳು, ರಾಜ ಕಾರಣಿಗಳು, ಶಾಲಾ ಆಡಳಿತ ವರ್ಗದವರೆಲ್ಲರೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಹೊಣೆಯಾಗುತ್ತಾರೆ. ಅವರೆಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನರಿತು ಸೂಕ್ತವಾದ ಕ್ರಮ ಕೈಗೊಂಡರೆ ಮುಗ್ಧ ಕಂದಮ್ಮಗಳ ಭವಿಷ್ಯದ ಮೇಲಾಗುವ ಪರಿಣಾಮಗಳನ್ನು ತಪ್ಪಿಸಬಹುದು.

ತಾವು ಏನಂತೀರಿ??...

Saturday 30 June, 2007

ನಗೆಗಡಲಲ್ಲಿ ತೇಲಾಡಿಸುವ "ಸತ್ಯವಾನ್ ಸಾವಿತ್ರಿ" !

ರಮೇಶ್ ಅರವಿಂದ್ ನಿರ್ದೇಶನದ ಎರಡನೇ ಪ್ರಯತ್ನವಾದ "ಸತ್ಯವಾನ್ ಸಾವಿತ್ರಿ" ಹಾಸ್ಯದ ಹೊನಲನ್ನೇ ಹರಿಸುತ್ತದೆ. ೧೯೬೯ ರಲ್ಲಿ ತೆರೆಕಂಡ "ಕ್ಯಾಕ್ಟಸ್ ಫ್ಲವರ್" ಎಂಬ ಹಾಲಿವುಡ್ ಚಿತ್ರದ ಕಥೆಯಿಂದ ಪ್ರೇರಿತವಾದ ಈ ಚಿತ್ರಕ್ಕೆ ರಮೇಶ್ ತಮ್ಮದೇ ಆದ ಶೈಲಿಯಲ್ಲಿ ನವಿರಾದ, ಹಾಸ್ಯ ಭರಿತವಾದ ಚಿತ್ರಕಥೆಯನ್ನು ಬರೆದು ನಿರ್ದೇಶಿಸಿದ್ದಾರೆ. ಆರಂಭದ ದೃಶ್ಯದಿಂದ ಹಿಡಿದು ಕೊನೆಯ ದೃಶ್ಯದವರೆಗೂ ಹಾಸ್ಯವೇ ತುಂಬಿ ತುಳುಕತ್ತಿದೆ. ನಿರೂಪಣೆಯಲ್ಲಿ ಎಲ್ಲಿಯೂ ಸೋಲದ ರಮೇಶ್ ಚಿತ್ರವನ್ನು ಒಂದು ಅದ್ಭುತ ಹಾಸ್ಯ ಚಿತ್ರವನ್ನಾಗಿಸಿದ್ದಾರೆ. ಅವರ ಈ ಶ್ರಮಕ್ಕೆ HATS OFF

ಇದು ಅವಿವಾಹಿತ ದಂತವೈದ್ಯ ಡಾ. ಸತ್ಯವಾನನ (ರಮೇಶ್) ಕಥೆ. ಸುಂದರವಾದ ಹೆಣ್ಣು ಮಕ್ಕಳನ್ನು ಮೋಡಿಮಾಡಿ ತನ್ನ ಬಲೆಗೆ ಹಾಕಿಕೊಂಡು ಅವರೊಡನೆ ಕೆಲವು ದಿನಗಳ ಕಾಲ ಸುತ್ತಾಡಿ, ಮೋಜು ಮಾಡಿ, ಮುಂದೊಂದು ದಿನ ಅವರ ಸಂಗ ಬೇಸರ ತಂದಕೂಡಲೇ ಜುಬ್ಬಾ ಧರಿಸಿ, ಅತ್ಯಂತ ವಿಧೇಯತೆಯಿಂದ "ನನಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿವೆ, ಕ್ಷಮಿಸಿ" ಎಂದು ಸುಳ್ಳು ಹೇಳಿ ಅವರಿಂದ ಮುಕ್ತಿ ಪಡೆಯುವುದೇ ಈ ಸ್ತ್ರೀ-ಲೋಲ ದಂತ ವೈದ್ಯನ ಕಾಯಕ. ಹೀಗೆ ಬೇಡದ ಹೆಣ್ಣುಮಕ್ಕಳಿಂದ ಬಿಡುಗಡೆ ಪಡೆಯುವ ಕಾಯಕಕ್ಕೆ "ಆಪರೇಷನ್ ಜುಬ್ಬಾ" ಎಂಬ ಹೆಸರು ಬೇರೆ!!!. ಮದುವೆಯೆಂಬ ಬಂಧನದಲ್ಲಿ ಸಿಲುಕಲೊಪ್ಪದೇ ಹುಡುಗಿಯರೊಂದಿಗೆ ಒಂದಷ್ಟು ದಿನ ಅಡ್ಡಾಡಿಕೊಂಡು ಆಕೆ ಬೇಜಾರಾದಾಗ ಇನ್ನೊಬ್ಬಳ ಕಡೆ ಗಮನ ಹರಿಸುವ ಸತ್ಯವಾನನ ಬಲೆಗೆ ಬೀಳುವ ಮತ್ತೊಬ್ಬ ಹುಡುಗಿಯೇ ಮೋನಿಷಾ (ಜನ್ನಿಫರ್ ಕೋತ್ವಾಲ್). ಸರಿ, ಮಾಮೂಲಿನಂತೆ ಈಕೆಯೊಡನೆಯೂ ಸುತ್ತಾಡಿ "ಯಾಕೋ ಜುಂ ಜುಂ ಅಂತೈತೆ ನನ್ ಮೈಯ್ಯಲ್ಲಿ..." ಅಂತೆಲ್ಲ ಹಾಡಿ ಕುಣಿದು ಕುಪ್ಪಳಿಸಿದ ಮೇಲೆ "ಆಪರೇಷನ್ ಜುಬ್ಬಾ"ದ ಮೂಲಕ ಈಕೆಯಿಂದ ಕಳಚಿಕೊಳ್ಳಲು ಯತ್ನಿಸುತ್ತಾನೆ ಡಾ ಸತ್ಯ. ಆದರೆ ಮೋಸವಾಗುವುದೇ ಇಲ್ಲಿ... ಮದುವೆಯಾಗಿ ಮಕ್ಕಳಿದೆ ಎಂದು ಪ್ರಾಮಾಣಿಕವಾಗಿ ಹೇಳಿರುವ ನಿನ್ನ ನಿಷ್ಠೆ ನನಗೆ ತುಂಬಾ ಇಷ್ಟವಾಯ್ತು.. ನೀನೇ ನನಗೆ ಸರಿಯಾದ ಜೋಡಿ ಎಂದು ಬಿಡುತ್ತಾಳೆ ಈ ಬಾಲೆ!!!. ಈಕೆಯಿಂದ ಬಚಾವಾಗಲು ಸುಳ್ಳುಗಳ ಮೇಲೆ ಸುಳ್ಳು ಹೇಳಬೇಕಾಗುತ್ತದೆ. ಮದುವೆಯಾಗದಿದ್ದರೆ ಆಸ್ತಿಯನ್ನೆಲ್ಲ ನಾಯಿ ಕಲ್ಯಾಣ ಸಂಘಕ್ಕೆ ಬರೆಯುವುದಾಗಿ ತಾತ (ದತ್ತಣ್ಣ) ಹೆದರಿಸಿದಾಗ ಮೋನಿಷಾಳನ್ನೇ ಮದುವೆಯಾಗುವ ತೀರ್ಮಾನಕ್ಕೆ ಬರುತ್ತಾನೆ ಡಾ. ಸತ್ಯ. ಆದರೆ ಮೋನಿಷಾ ನಿನ್ನ ಪತ್ನಿಗೆ ನಾನು ಮೋಸ ಮಾಡಲಾರೆ, ಅವಳೊಪ್ಪುವುದಾದರೆ ಮಾತ್ರ ನಿನ್ನ ಜೊತೆ ಮದುವೆ... ಅವಳನ್ನು ಒಮ್ಮೆ ಮಾತಾಡಿಸಬೇಕು.. ತೋರಿಸು ಎಂದು ಹಠ ಹಿಡಿದಾಗ ತನ್ನ ಕ್ಲಿನಿಕ್ ನ ನರ್ಸ್ ಸುಬ್ಬಲಕ್ಷ್ಮಿ ಯಲ್ಲಿ (ಡೈಸಿ ಬೋಪಣ್ಣ) ತನ್ನ ಹೆಂಡತಿ "ಸಾವಿತ್ರಿ" ಯಾಗಿ ನಟಿಸುವಂತೆ ಕೇಳಿಕೊಳ್ಳುತ್ತಾನೆ. ಡಾ.ಸತ್ಯವಾನನ್ನು ಮಾನಸಿಕವಾಗಿ ಪ್ರೀತಿಸುವ ಸುಬ್ಬಲಕ್ಷ್ಮಿ ಇದಕ್ಕೆ ಒಪ್ಪುತ್ತಾಳೆ. ಮುಂದೇನಾಗುತ್ತದೆ?? ಕೊನೆಗೆ ಸತ್ಯವಾನನ ಸಾವಿತ್ರಿಯಾಗುವುದು ಯಾರು, ಈ ಎಲ್ಲ ಸಮಸ್ಯೆಗಳ ಸುಳಿಯಿಂದ ಡಾಕ್ಟರ್ ಹೇಗೆ ತಪ್ಪಿಸಿಕೊಳ್ಳುತ್ತಾನೆಂಬುದನ್ನು ರಮೇಶ್ ಅತ್ಯಂತ ದಕ್ಷವಾಗಿ, ಹೊಟ್ಟೆ ಹುಣ್ಣಾಗುವಂತೆ ನಗಿಸುವುದರ ಮೂಲಕ ತೆರೆಯ ಮೇಲೆ ತೋರಿಸಿದ್ದಾರೆ... ಒಂದು ಸುಳ್ಳನ್ನು ಮುಚ್ಚಿಡಲು ಸುಳ್ಳುಗಳ ಸರಮಾಲೆಯನ್ನೇ ಹರಿಸುವ ಸತ್ಯನ ಪಾಡನ್ನು ನೋಡಲು ಎರಡು ಕಣ್ಣುಗಳು ಸಾಲದು. ನೋಡಿ ಆನಂದಿಸಿ.


ಸತ್ಯವಾನನಾಗಿ ರಮೇಶ್‍ಗೆ ಫುಲ್ ಮಾರ್ಕ್ಸ್. . ಜೆನ್ನಿಫರ್ ಅಭಿನಯ ಓಕೆ. ಆದರೆ ಎಲ್ಲರ ಮೆಚ್ಚುಗೆಗೆ ಪಾತ್ರಳಾಗುವುದು ಕೊಡಗಿನ ಬೆಡಗಿ, ಕನ್ನಡತಿ ಡೈಸಿ ಬೋಪಣ್ಣ. ನರ್ಸ್ ಸುಬ್ಬಮ್ಮನ ಪಾತ್ರಕ್ಕೆ ಜೀವ ತುಂಬುವಂತೆ ಡೈಸಿ ಅಭಿನಯಿಸಿದ್ದಾಳೆ. ಉಳಿದಂತೆ ಮೋನಿಷಾಳ ಪ್ರೇಮಿಯಾಗಿ ಅನಿರುದ್ಧ, ಗೆಳೆಯನಾಗಿ ಮೋಹನ್, ದಂತ ಚಿಕಿತ್ಸೆಗಾಗಿ ಬರುವ ಶೆಟ್ಟರು (ಸುಂದರ್ ರಾಜ್) ಮತ್ತು ಪುಕ್ಕಲ ಗೌಡ (ಕೋಮಲ್ ಕುಮಾರ್) ನಗುವಿನ ಓಟಕ್ಕೆ ಮತ್ತಷ್ಟು ವೇಗವನ್ನು ಕೊಡುತ್ತಾರೆ. ಗುರುಕಿರಣ್ ಸಂಗೀತದಲ್ಲಿ ಮೂರು ಹಾಡುಗಳು ಸುಂದರವಾಗಿ ಮೂಡಿ ಬಂದಿವೆ. ಅದರಲ್ಲೂ "ಫಸ್ಟ್ ಟೈಮ್ ನಿನ್ನ ನೋಡಿದಾಗ.." ಹಾಡಂತೂ ಅತ್ಯಂತ ಸುಂದರವಾಗಿ ಚಿತ್ರಿತವಾಗಿದ್ದು ಕಣ್ಣು ಕಿವಿಗಳೆರಡಕ್ಕೂ ಮಹದಾನಂದವನ್ನುಂಟುಮಾಡುತ್ತದೆ. ಪಿ.ಕೆ.ದಾಸ್ ಛಾಯಾಗ್ರಹಣದಲ್ಲಿ ಮಿಂಚಿದ್ದಾರೆ.


ಕನ್ನಡದಲ್ಲಿ ಒಳ್ಳೊಳ್ಳೆಯ ಚಿತ್ರಗಳು ಬರುತ್ತಿರುವ ಈ ಶುಭ ಸಂದರ್ಭದಲ್ಲಿ "ಸತ್ಯವಾನ್ ಸಾವಿತ್ರಿ"ಯ ಆಗಮನ ಮತ್ತಷ್ಟು ಸಂತಸವನ್ನು ತರುತ್ತದೆ. ರಮೇಶ್ ಕನ್ನಡಕ್ಕೆ ನಿಜವಾಗಲೂ ಒಂದು ಕೊಡುಗೆ. ರಾಮಾ ಶ್ಯಾಮಾ ಭಾಮದ ನಂತರ ಹೆಚ್ಚಾಗಿದ್ದ ಜವಾಬ್ದಾರಿಯನ್ನು "ಸತ್ಯವಾನ್ ಸಾವಿತ್ರಿ"ಯ ಮೂಲಕ ಸಮರ್ಥವಾಗಿ ನಿಭಾಯಿಸಿದ್ದಾರೆ. .

ಇನ್ನೇಕೆ ತಡ... ಹೋಗಿ, ಮನೆ ಮಂದಿಯೆಲ್ಲ ಕುಳಿತು "ಸತ್ಯವಾನ್ ಸಾವಿತ್ರಿ"ಯನ್ನು ನೋಡಿ ನಕ್ಕು ನಲಿದು ಬನ್ನಿ. ನಗೆಗಡಲಲ್ಲಿ ತೇಲಾಡಿ.

ನನ್ನ ಅಂಕ - 9/10

Wednesday 27 June, 2007

ಆರ್ಕುಟ್" ಎಂಬ ಮಾಯಾ ಜಾಲ!

ಹೇಯ್, ನಿಂಗೆ ಸ್ಕ್ರ್ಯಾಪ್ ಮಾಡ್ತೀನಿ.. ", "ನನ್ನ ಸ್ಕ್ರ್ಯಾಪ್ ಬುಕ್ ನೋಡು".. "ನಿನ್ನ ಹೊಸ ಟೆಸ್ಟಿಮೊನಿ ಸಖತ್ತಾಗಿದೆ.. ಯಾರೋ ಅವನು ಬರೆದಿದ್ದು?", "ಅಲ್ಬಮ್ ಅಪ್‍ಡೇಟ್ ಮಾಡೋ", "ನನ್ನನ್ನ ಫ್ರೆಂಡ್ ಲಿಸ್ಟ್ ಗೆ ಸೇರಿಸ್ಕೋ".. ಏನಿದು ವಿಚಿತ್ರವಾಗಿದೆ ಅಂತೀರಾ? ಇದು ಆರ್ಕುಟ್ ಎಂಬ ಅಂತರ್ಜಾಲದ ನೂತನ ತಾಣ ಸೃಷ್ಟಿಸಿರೋ ಹೊಸ ಪದಗಳು... ಯುವ ಜನಾಂಗವನ್ನು ಗಾಢವಾಗಿ ತನ್ನತ್ತ ಸೆಳೆದಿರುವ ಮಾಹಿತಿ ತಂತ್ರಜ್ಞಾನದ ನೂತನ ಆವಿಷ್ಕಾರ.

ಏನಿದು ಆರ್ಕುಟ್ ?

ಆರ್ಕುಟ್ ಎಂಬುದು ಪರಸ್ಪರ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು, ವಿಷಯಗಳ ಬಗ್ಗೆ ಮತ್ತು ಚರ್ಚಿಸಲು, ಭೌಗೋಳಿಕವಾಗಿ ದೂರ ದೂರವಿರುವ ಸ್ನೇಹಿತರ ನಡುವೆ ಸಂಪರ್ಕ ಸೇತುವೆಯನ್ನು ನಿರ್ಮಿಸಲು ಅನುಕೂಲವನ್ನು ಕಲ್ಪಿಸುವ ಅಂತರ್ಜಾಲದ ಒಂದು ತಾಣ. (http://www.orkut.com).

ಹೊಸ ಸ್ನೇಹಿತರು ಬೇಕೇ? ಇಲ್ಲಿ ಸುಲಭವಾಗಿ ಸಂಪಾದಿಸಿ ಅವರೊಡನೆ ಹರಟ ಬಹುದು. ಆರ್ಕುಟ್‍ನ ಸ್ಕ್ರ್ಯಾಪ್ ಬುಕ್‍ಗಳಿರುವುದೇ ಸ್ನೇಹಿತರ ನಡುವಣ ದೈನಂದಿನ ಹರಟೆಗಾಗಿ. ನಿಮ್ಮ ಬಾಲ್ಯದ ಗೆಳೆಯನೊಡನೆ ಸಂಪರ್ಕ ಕಳೆದು ಹೋಗಿದೆಯೇ? ಆರ್ಕುಟ್‍ನಲ್ಲಿ ಹುಡುಕಾಡಿದರೆ ಸಿಗದೇ ಇರುವ ಸಾಧ್ಯತೆ ಕಡಿಮೆ!. ನಿಮ್ಮ ಸ್ನೇಹಿತನ ಬಗ್ಗೆ ಮೆಚ್ಚುಗೆಯ ಮಾತಾಡಬೇಕೆ? ಅವನ ಗುಣ ವಿಶೇಷಗಳನ್ನು ಇತರರಿಗೆ ಪರಿಚಯಿಸಬೇಕೆ? ಹಾಗಿದ್ದರೆ ನೀವು ಅತನಿಗೂಂದು "ಟೆಸ್ಟಿಮೋನಿ" ಬರೆಯಬಹುದು. ನಿಮ್ಮ ಮಧುರ ಕ್ಷಣಗಳನ್ನು ನೆನಪಿಸುವ ಭಾವಚಿತ್ರ, ವೀಡಿಯೋಗಳನ್ನು ಇತರರೊಡನೆ ಹಂಚಿಕೊಳ್ಳಬೇಕೇ? , ಆರ್ಕುಟ್‍ನಲ್ಲಿ ಸುಲಭವಾಗಿ ಮಾಡಬಹುದು. ಹೊಸ ಚಿತ್ರಗಳ ಬಗ್ಗೆ, ಹೊಸ ವಿಚಾರಗಳ ಬಗ್ಗೆ ಇತರರ ಅಭಿಪ್ರಾಯವನ್ನು ತಿಳಿಯಬೇಕೇ? ಆರ್ಕುಟ್‍ನ ಕಮ್ಯೂನಿಟಿ ಪುಟದಲ್ಲಿ ಹೊಸ ಅಂಕಣವೊಂದನ್ನು ಆರಂಭಿಸುವ ಮೂಲಕ ಒಂದು ಚರ್ಚಾ ವೇದಿಕೆಯನ್ನೇ ಸೃಷ್ಟಿಸಬಹುದು.

ಯಾಕಿಷ್ಟು ಜನಪ್ರಿಯ ?

ಮೇಲೆ ಹೇಳಿರುವ ಎಲ್ಲಾ ಸೌಲಭ್ಯಗಳನ್ನು ಸುಲಭವಾಗಿ ಒದಗಿಸಿರುವುದರ ಜೊತೆಗೆ ಆರ್ಕುಟ್‍ನ ಜನಪ್ರಿಯತೆಗೆ ಇನ್ನೊಂದು ಪ್ರಮುಖ ಕಾರಣವೂ ಇದೆ. ಅದೆಂದರೆ ಆರ್ಕುಟ್ ಒದಗಿಸುವ ಮುಕ್ತ ವಿಹಾರ. ಯಾರು ಯಾರ ಪುಟಗಳನ್ನು ಬೇಕಾದರೂ ವೀಕ್ಷಿಸಬಹುದು. ನಿಮ್ಮ ಸ್ನೇಹಿತ ಅವನ ಸ್ನೇಹಿತರೊಂದಿಗೆ ಏನೇನು ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದಾನೆ, ಅವನಿಗಿರುವ ಸ್ನೇಹಿರರು ಯಾರ್ಯಾರು? ಅವನ ಅಭಿರುಚಿಗಳೇನು? ಅವನ ಬಗ್ಗೆ ಯಾರು ಯಾರು ಏನೇನು ಅಭಿಪ್ರಾಯಪಡುತ್ತಾರೆಂಬುದನ್ನು ಸುಲಭವಾಗಿ ನೋಡಬಹುದು. ಅವನ ಸ್ನೇಹಲೋಕದಲ್ಲಿ ನಿಮ್ಮ ಸ್ನೇಹಿತರೂ ಸಿಕ್ಕರೆ ಅವರನ್ನೂ ನಿಮ್ಮ ಸ್ನೇಹಿತರ ಬಳಗಕ್ಕೆ ಸೇರಿಸಿಕೊಳ್ಳಬಹುದು. ಬಹುಷಃ ಇಷ್ಟೊಂದು ಮುಕ್ತತೆ, ಸ್ವಾತಂತ್ರ್ಯಗಳನ್ನು ಒದಗಿಸಿದ್ದು ಆರ್ಕುಟ್‍ನಲ್ಲೇ ಮೊದಲು ಎನ್ನಬಹುದು.

ದುರ್ಬಳಕೆ:

ಮೇಲೆ ಹೇಳಿರುವ ಅಂಶಗಳೆಲ್ಲ ಆರ್ಕುಟ್‍ನ ಒಂದು ಮುಖವನ್ನು ಪರಿಚಯಿಸಿದರೆ ಆರ್ಕುಟ್‍ನ ಇನ್ನೊಂದು ಮುಖದ ಬಗ್ಗೆಯೂ ಹೇಳಲೇ ಬೇಕಾಗುತ್ತದೆ. ಊರಿದ್ದಲ್ಲಿ ಕೊಳಗೇರಿಯೂ ಇದ್ದೇ ಇರುತ್ತದೆ ಎಂಬ ಮಾತು ಆರ್ಕುಟ್‍ಗೂ ಅನ್ವಯಿಸುತ್ತದೆ. ಯುವ ಜನಾಂಗದ ಮಧ್ಯೆ ಅತ್ಯಂತ ಜನಪ್ರಿಯತೆಯನ್ನು ಗಳಿಸಿರುವ ಆರ್ಕುಟ್ ‍ನ ದುರ್ಬಳಕೆಯೂ ಅನೂಚಿತವಾಗಿ ಸಾಗುತ್ತಲೇ ಇದೆ. ಅಶ್ಲೀಲ ವಿಷಯಗಳ ಬಗ್ಗೆ ಚರ್ಚಿಸಲು, ವಿಷಯಗಳಬಗ್ಗೆ, ವ್ಯಕ್ತಿಗಳ ಬಗ್ಗೆ ಸಲ್ಲದ ಅಪಪ್ರಚಾರ ಮಾಡಲು ಆಮೂಲಕ ಅಮಾಯಕ ಯುವ ಜನತೆಯನ್ನು ತಪ್ಪು ಹಾದಿಗೆಳೆಯುವಲ್ಲಿ ಆರ್ಕುಟ್‍ನ ದುರ್ಬಳಕೆಯಾಗುತ್ತಿರುವುದು ಖೇದಕರ ಸಂಗತಿ. ಈ ಮಧ್ಯಮದಿಂದ ಅನುಕೂಲಗಳೆಷ್ಟು ಆಗಿವೆಯೋ, ಅಷ್ಟೇ ಅನನುಕೂಲಗಳೂ ಆಗುತ್ತಿವೆ. ಆದರೆ ವಿಚಾರವಂತರಾದ ನಾವು ಇದರ ಸದ್ಬಳಕೆಯನ್ನು ಮಾಡಿಕೊಳ್ಳಬೇಕೇ ವಿನಃ ದುರ್ಬಳಕೆಯನ್ನಲ್ಲ.

Friday 22 June, 2007

ಚೆಲುವಿನ ಚಿತ್ತಾರ - ಇದು ಸತ್ಯ ಕಥೆ, ತಮಿಳು ನಾಡಿನ ತಿರುಚ್ಚಿಯಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿದೆ. ಈ ಚಿತ್ರದಲ್ಲಿ ಬರುವ ಎಲ್ಲ ಪಾತ್ರಗಳೂ ಜೀವಂತ ಎಂಬ ಮಾಹಿತಿಯೊಂದಿಗೆ ಎಸ್. ನಾರಾಯಣ್ ಚೆಲುವಿನ ಚಿತ್ತಾರವನ್ನು ಬರೆಯಲು ಆರಂಭಿಸುತ್ತಾರೆ. ತಮಿಳಿನ "ಕಾದಲ್" ಚಿತ್ರವನ್ನು ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಕನ್ನಡೀಕರಿಸಿದ್ದಾರೆ ನಾರಾಯಣ್.

ಟಿ. ನರಸೀಪುರದಲ್ಲಿ ಕಥೆ ಆರಂಭಗೊಳ್ಳುತ್ತದೆ... ಮಾದೇಶ ಎಂಬ ಬಡ ಮೆಕ್ಯಾನಿಕ್ ಹುಡುಗ(ಗಣೇಶ್) ಮತ್ತು ಐಶ್ವರ್ಯ (ಅಮೂಲ್ಯ) ಎಂಬ ಶ್ರೀಮಂತ ಬಾಲೆಯ ಭೇಟಿ ಬೈಕ್ ಢಿಕ್ಕಿಗೊಳ್ಳುವ ಪ್ರಕರಣದೊಂದಿಗೆ ಆರಂಭವಾಗಿ, ಆ ಭೇಟಿ ಜಗಳವಾಗಿ, ಆ ಜಗಳವೇ ನಂತರ ಪ್ರೀತಿಯಾಗಿ ಮಾರ್ಪಡುತ್ತದೆ. ಐಶ್ವರ್ಯಳ ಮದುವೆ ಪ್ರಸ್ತಾಪ ಆಕೆಯ ಮಾವನ ಮಗನೊಂದಿಗೆ ನಡೆಯುತ್ತದೆ... ಹೆದರಿದ ಐಶ್ವರ್ಯ ಮತ್ತು ಮಾದೇಶ ಬೇರೆ ಗತಿಯಿಲ್ಲದೆ ಬೆಂಗಳೂರಿಗೆ ಓಡಿ ಹೋಗುತ್ತಾರೆ.ಅಲ್ಲಿ ಸ್ನೇಹಿತನೊಬ್ಬನ (ಕೋಮಲ್) ಸಹಾಯದಿಂದ ಮದುವೆಯಾಗಿ ಬಾಡಿಗೆ ಮನೆಯೊಂದನ್ನು ಹಿಡಿಯುತ್ತಾರೆ... ಅಷ್ಟರಲ್ಲಿ ಐಶ್ವರ್ಯಳ ಗೆಳತಿಯಿಂದ ಆಕೆ ಓಡಿ ಹೋಗಿರುವ ವಿಷಯ ತಿಳಿದ ಐಶ್ವರ್ಯಳ ಮನೆಯವರು ಬೆಂಗಳೂರಿಗೆ ಬಂದು ಅವರನ್ನು ಹುಡುಕುವಲ್ಲಿ ಯಶಸ್ವಿಯಾಗುತ್ತಾರೆ. ಆಗಿದ್ದಾಯಿತು, ಮನೆಗೆ ಬನ್ನಿ, ಎಲ್ಲರೊಂದಿಗೆ ಮಾತಾಡಿ ಮದುವೆಯನ್ನು ಶಾಸ್ತ್ರೋಕ್ತವಾಗಿ ಮಾಡಿಸುತ್ತೇವೆ ಎಂದು ನಂಬಿಸಿ ಅವರನ್ನು ವಾಪಾಸ್ ಮನೆಗೆ ಕರೆ ತರುತ್ತಾರೆ... ಆದರೆ ವಾಪಸ್ ಬಂದ ಮೇಲೆ ಅಲ್ಲಿ ನಡೆಯುವ ಘಟನೆಗಳೇ ಬೇರೆ... ಈ ಯುವ ಪ್ರೇಮಿಗಳ ಪರಿಸ್ಥಿತಿ ಹೃದಯ ವಿದ್ರಾವಕವಾಗುತ್ತದೆ... ಚಿತ್ರದ ಅಂತ್ಯ ವಿಭಿನ್ನವಾಗಿದೆ.. ಸತ್ಯ ಕಥೆಯೆಂದು ಮೊದಲೇ ಹೇಳಿರುವುದರಿಂದ ಈ ರೀತಿಯ ಅಂತ್ಯವನ್ನು ಸ್ವೀಕರಿಸಲೇ ಬೇಕಾದುದು ಅನಿವಾರ್ಯವಾಗಿದೆ... ಪೊರ್ವಾರ್ಧ ಸಂಪೂರ್ಣ ಹಾಸ್ಯಮಯ, ಪ್ರೇಮಮಯ, ಲವಲವಿಕೆಯ ಆಗರ... ಉತ್ತರಾರ್ಧ ಪ್ರೇಮಿಗಳು ಪಡುವ ಪಾಡು ಹಾಗೂ ಗೋಳಿನ ಸಾಗರ...

ವಿಭಿನ್ನ ಪಾತ್ರವಾದರೂ ಅಭಿನಯದಲ್ಲಿ ಗಣೇಶ್ ಮಿಂಚುತ್ತಾರೆ.. ಕೋಮಲ್ ಹಾಸ್ಯ ಮನಸ್ಸಿಗೆ ಮುದ ನೀಡುತ್ತದೆ... ಹೊಸ ನಟಿ ಅಮೂಲ್ಯ ಪೂರ್ವಾರ್ಧದಲ್ಲಿ ಲವಲವಿಕೆಯಿಂದ ನಟಿಸಿ ಮನ ಗೆಲ್ಲುತ್ತಾಳೆ.. ಆದರೆ ದುಃಖದ ಸನ್ನಿವೇಶಗಳಲ್ಲಿ ಆಕೆಯ ಅಪ್ರಭುದ್ಧತೆ ಎದ್ದು ಕಾಣುತ್ತದೆ. ಆದರೆ ನಾಯಕಿಯಾಗಿ ಮೊದಲ ಚಿತ್ರವಾಗಿದ್ದರೂ ಹಲವಾರು ಸನ್ನಿವೇಶಗಳನ್ನು ಅಮೂಲ್ಯಳಿಂದ ಉತ್ತಮವಾದ ಅಭಿನಯವನ್ನು ಹೊರತೆಗೆಯುವಲ್ಲಿ ನಾರಾಯಣ್ ಯಶಸ್ವಿಯಾಗಿದ್ದಾರೆ.

ಮನೋಮೂರ್ತಿ ಸಂಗೀತ ಇಂಪಾಗಿದೆ. ಎರಡು ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ಪೋಷಕ ನಟರೆಲ್ಲ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಚಿತ್ರದ ಕಥೆಯಲ್ಲಿ ಅಂತ ಹೊಸತನವೇನೂ ಇಲ್ಲದಿದ್ದರೂ ಚಿತ್ರಕಥೆ ಎಲ್ಲೂ ಹಳಿ ತಪ್ಪುವುದಿಲ್ಲ. ಮಹಿಳಾ ಪ್ರೇಕ್ಷಕರನ್ನು ಆಕರ್ಷಿಸುವ ಎಲ್ಲ ಮಸಾಲಗಳನ್ನು ಚಿತ್ರ ಒಳಗೊಂಡಿರುವುದರಿಂದ ಹಾಗೂ ಒಂದೆರಡು ಹಾಡುಗಳು ಚೆನ್ನಾಗಿರುವುದರಿಂದ ಚಿತ್ರ ಯಶಸ್ವಿಯಾದರೆ ಯಾವುದೇ ಆಶ್ಚರ್ಯವಿಲ್ಲ.

Saturday 16 June, 2007

73-ಶಾಂತಿ ನಿವಾಸ - ಒಂದು ಸುಂದರ ಅನುಭವ!

73- ಶಾಂತಿ ನಿವಾಸ - ಸುದೀಪ್ ನಿರ್ದೇಶನದ ಎರಡನೇ ಚಿತ್ರ. ಹೃಷೀಕೇಶ್ ಮುಖರ್ಜಿಯವರ "ಬಾವರ್ಚಿ" ಚಿತ್ರವನ್ನು ಕನ್ನಡ ಪರದೆಯ ಮೇಲೆ ಹೇಗೆ ತಂದಿದ್ದಾರೋ ಎಂಬ ಸಣ್ಣ ಭಯದ ನಡುವೆಯೇ ಚಿತ್ರಮಂದಿರ ಪ್ರವೇಶಿಸಿದೆ... ಆರಂಭದಲ್ಲೇ ಒಂದು ಆಶ್ಚರ್ಯ ಕಾದಿತ್ತು... ಮೊದಲ ದೃಶ್ಯದಲ್ಲೇ ಶಿವಣ್ಣ ಪ್ರತ್ಯಕ್ಷ!!!. ಪಾತ್ರಗಳ ಪರಿಚಯಿಸುವ ರೀತಿ ಅತ್ಯಂತ ವಿಶಿಷ್ಟವಾಗಿ ಬಂದಿದೆ... ಈ ಕೆಲಸವನ್ನು ಶಿವಣ್ಣ ಅಚ್ಚುಕಟ್ಟಾಗಿ ಮಾಡಿದ್ದಾರೆ.

ಚಿತ್ರ ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಎಲ್ಲೂ ಬೇಸರ ತರಿಸದ ರೀತಿಯಲ್ಲಿ ಎರಡೂ ಮುಕ್ಕಾಲು ಗಂಟೆಗಳಲ್ಲಿ ಒಂದು ಕೌಟುಂಬಿಕ ಕಥಾ ಹಂದರವನ್ನು ನವಿರಾಗಿ ನಿರೂಪಿಸಿದ್ದಾರೆ ಕಿಚ್ಚ ಸುದೀಪ್.. ಪ್ರತಿಯೊಂದು ಪಾತ್ರವೂ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ. ಯಾವೊಂದು ಪಾತ್ರವೂ, ಸನ್ನಿವೇಶವೂ ಅನವಶ್ಯಕವೆನಿಸುವುದಿಲ್ಲ... ಚಿತ್ರಕಥೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸುವಲ್ಲಿ ಸುದೀಪ್ ಸಫಲರಾಗಿದ್ದಾರೆ.

ಚಿತ್ರದ ಕಥೆ ಸರಳವಾದರೂ ಸುಂದರವಾದುದು. "73-ಶಾಂತಿ ನಿವಾಸ" -ಇದು ಹೆಸರಿಗೆ ಮಾತ್ರ ಶಾಂತಿ ನಿವಾಸ.. ಒಳಗಿರುವುದು ಬರೀ ಜಗಳ, ಅಶಾಂತಿ. ಇಂತಹ ಗಲಾಟೆ ಸಂಸಾರದಲ್ಲಿ ಅಡುಗೆ ಭಟ್ಟರಾಗಿ ಬಂದವರ್ಯಾರೂ ಬಹಳ ದಿನ ಉಳಿಯುವುದೇ ಇಲ್ಲ... ಈ ಅವಿಭಕ್ತ ಕುಟುಂಬದ ಮುಖ್ಯಸ್ಥ ಕೈಲಾಶನಾಥರಿಗೆ (ಮಾಸ್ಟರ್ ಹಿರಣ್ಣಯ್ಯ) ನಾಲ್ವರು ಗಂಡು ಮಕ್ಕಳು. ಹಿರಿಯ ಮಗ ರಾಮನಾಥ (ಶ್ರೀನಿವಾಸ ಮೂರ್ತಿ) ಮತ್ತು ಸೀತಾ ದೇವಿ (ವೈಶಾಲಿ ಕಾಸರವಳ್ಳಿ) ದಂಪತಿಗಳಿಗೆ ಒಬ್ಬಳು ಮಗಳು ನೀತಾ (ಅನು ಪ್ರಭಾಕರ್). ಎರಡನೇ ಮಗ ಮತ್ತು ಸೊಸೆ ಕಾರು ಅಪಘಾತದಲ್ಲಿ ಅಸು ನೀಗಿರುತ್ತಾರೆ. ಅವರ ಮಗಳು ರಾಧಾ (ದೀಪು) ಈ ಚಿತ್ರದ ನಾಯಕಿ.ಮೂರನೆಯವನು ಕಾಶೀನಾಥ (ರಮೇಶ್ ಭಟ್) ಮತ್ತು ಆತನ ಮಡದಿ ಶೋಭಾ (ಚಿತ್ರಾ ಶಣೈ) ದಂಪತಿಗಳಿಗೆ ಒಬ್ಬನೇ ಮಗ. ಇನ್ನು ನಾಲ್ಕನೆಯ ಸುಪುತ್ರನೇ ಜಗನ್ನಾಥ (ಕೋಮಲ್) - ಸ್ವಯಂ ಘೋಷಿತ ಸಂಗೀತ ನಿರ್ದೇಶಕ!. ತನ್ನ ಚಿತ್ರ ವಿಚಿತ್ರ ರಾಗ ಸಂಯೋಜನೆಗಳಿಂದ ಮನೆಯವರ ತಲೆ ತಿಂದು ನೋಡುಗರಿಗೆ ನಗೆ ಬುಗ್ಗೆಯನ್ನು ತರಿಸುವಾತ!!!ಈ ಕುಟುಂಬದ ಜನರಲ್ಲಿ ಸಾಮರಸ್ಯವೇ ಇಲ್ಲ!!. ಸೊಸೆಯರಿಬ್ಬರೂ ಮೈಗಳ್ಳಿಯರು. ಮನೆಗೆಲಸ ಮಾಡದ ಗಂಡು ಮಕ್ಕಳು... ನಾಟ್ಯಕಲಿಕೆಯಲ್ಲಿ ನಿರತಳಾದ ಅಹಂಕಾರೀ ಮೊಮ್ಮಗಳು ನೀತು (ಅನು ಪ್ರಭಾಕರ್) ಇವರುಗಳ ನಡುವೆ ಪಾಪ ಬೆಳಗಿನ ಕಾಫಿಯನ್ನು ಕೇಳುವವರೂ ಇಲ್ಲದ ಹಿರಿಯ ತಲೆ ಕೈಲಾಶನಾಥರು!. ಅಡುಗೆಯವರಿಲ್ಲದೇ ಇವರ ದಿನಚರಿಯೇ ಓಡುವುದಿಲ್ಲ.. ಆದರೆ ಈ ರೀತಿ ಕಲಹಪ್ರಿಯ, ಅಶಾಂತಿ ನಿಲಯದಲ್ಲುಳಿಯಲು ಯಾವ ಅಡುಗೆ ಭಟ್ಟನೂ ತಯಾರಿಲ್ಲ!!!ಹೀಗಿರುವ ಕುಟುಂಬಕ್ಕೆ ಅಡುಗೆ ಭಟ್ಟನಾಗಿ ನಾಯಕ ರಘು (ಸುದೀಪ್) ಪ್ರವೇಶಿಸುತ್ತಾನೆ. ಒಡೆದ ಮನಗಳನ್ನು ಬೆಸೆದು ಒಂದು ಮಾಡುತ್ತಾನೆ. ಎಲ್ಲರ ಹೃದಯದಲ್ಲೂ ಸ್ಥಾನ ಪಡೆಯುತ್ತಾನೆ. ದ್ವೇಷತುಂಬಿರುವ ಮನೆಯಲ್ಲಿ ಪ್ರೀತಿಯ ಕಂಪನ್ನು ಹರಡುತ್ತಾನೆ. ಸಕಲ ಕಲಾ ಪ್ರವೀಣನಾದ ಈತ ಅಡುಗೆಯ ಜೊತೆಗೆ, ಹಾಡುತ್ತಾನೆ, ನೃತ್ಯ ಕಲಿಸುತ್ತಾನೆ, ಮನೆಗೆಲಸ ಮಾಡುತ್ತಾನೆ, ಮನೆ ಪಾಠವನ್ನೂ ಹೇಳುತ್ತಾನೆ.. ಹೀಗೆ ಎಲ್ಲರ ಮನ ಗೆದ್ದು ಮನೆಯನ್ನು ನಿಜವಾದ ಶಾಂತಿನಿವಾಸವನ್ನಾಗಿಸುತ್ತಾನೆ... ಹೀಗಿರುವಾಗ, ತಾತ ಕೈಲಾಶನಾಥರು ಸದಾ ಕಾಪಾಡಿಕೊಂಡು ಬಂದಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಒಡವೆ, ನಗ ನಾಣ್ಯಗಳಿದ್ದ ಪೆಟ್ಟಿಗೆಯ ದರೋಡೆಯಾಗುತ್ತದೆ!!!! ಜೊತೆಗೆ ಅಡುಗೆ ಭಟ್ಟ ರಘು ಕೂಡ ನಾಪತ್ತೆ!!! ಮುಂದೇನಾಗುತ್ತದೆ??? ರಘು ಕಳ್ಳನೇ??? ಅವನೇಕೆ ಈ ಮನೆಗೆ ಬಂದ??? ಒಡವೆಗಳು ಕಾಣೆಯಾಗಲು ಕಾರಣವೇನು??? ತೆರೆಯ ಮೇಲೆ ವೀಕ್ಷಿಸಿ... ಚಿತ್ರದ ಅಂತ್ಯ ವಿಶಿಷ್ಟವಾಗಿ, ಸುಂದರವಾಗಿ, ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ.

ಚಿತ್ರ ಆರಂಭಗೊಳ್ಳುವುದು ಶಿವಣ್ಣನಿಂದಾದರೆ ಅಂತ್ಯಗೊಳ್ಳುವುದು ಸಾಹಸ ಸಿಂಹ ವಿಷ್ಣುವರ್ಧನರಿಂದ!!!...

ಸಕಲ ಕಲಾ ಪ್ರವೀಣನಾದ ಅಡುಗೆ ಭಟ್ಟ ರಘುವಿನ ಪಾತ್ರದಲ್ಲಿ ಸುದೀಪ್ ಪರಕಾಯ ಪ್ರವೇಶ ಮಾಡಿದ್ದು, ಬಹುಕಾಲ ನೆನಪಿನಲ್ಲುಳಿಯುವ ಅಭಿನಯವನ್ನು ನೀಡಿದ್ದಾರೆ. ಬಹಳ ಕಾಲದ ನಂತರ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿರುವ ಕನ್ನಡ ರಂಗಭೂಮಿಯ ಹಿರಿಯ ನಟ, ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ಭಾವಪೂರ್ಣ ಅಭಿನಯವನ್ನು ಮನಃ ಪೂರ್ತಿಯಾಗಿ ಸವಿಯಬಹುದು. ಶ್ರೀನಿವಾಸಮೂರ್ತಿ, ರಮೇಶ್ ಭಟ್, ದೀಪು, ಅನು ಪ್ರಭಾಕರ್, ವೈಶಾಲಿ ಕಾಸರವಳ್ಳಿ, ಚಿತ್ರ ಶಣೈ ಎಲ್ಲರ ಅಭಿನಯವೂ ಸೂಪರ್!. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಬಾಲಿವುಡ್, ಟಾಲಿವುಡ್, ಕಾಲಿವುಡ್‍ಗಳಿಂದ ನಟಿಯರನ್ನು ಆಮದು ಮಾಡಿಕೊಳ್ಳುವ ನಮ್ಮ ನಿರ್ಮಾಪಕ, ನಿರ್ದೇಶಕರ ಕಪಾಳಕ್ಕೆ ಹೊಡೆಯುವ ರೀತಿಯಲ್ಲಿ ನಮ್ಮ ದೀಪು ನಟಿಸಿದ್ದಾಳೆ.ನಾಟ್ಯ ಗುರುವಾಗಿ ಅರುಣ್ ಸಾಗರ್, "ಸಂಗೀತ ನಿರ್ದೇಶಕ"ನಾಗಿ ಕೋಮಲ್ ಕುಮಾರ್ ಚೆನ್ನಾಗಿ ನಗಿಸುತ್ತಾರೆ.ಹಾಡುಗಳು ಅತ್ಯುತ್ತಮವಲ್ಲದಿದ್ದರೂ ತೀರಾ ಕಳಪೆಯೂ ಅಲ್ಲ... ಆದರೆ ಸಂಗೀತ ಇನ್ನೂ ಸ್ವಲ್ಪ ಚೆನ್ನಾಗಿ ಬರಬಹುದಾಗಿತ್ತು.. ಹಾಡುಗಳ ಚಿತ್ರೀಕರಣ ಚೆನ್ನಾಗಿ ಬಂದಿದೆ. ರಾಜೇಶ್ ಕೃಷ್ಣನ್ ಹಾಡಿರುವ "ಪ್ರೀತಿ ಎಂದರೆ ಹೀಗೇನೆ" ಶಾಸ್ತ್ರೀಯ ಸಂಗೀತವಾಗಿದ್ದು ಇದರ ಚಿತ್ರೀಕರಣ ಚನ್ನಾಗಿ ಬಂದಿದೆ. ಮೇಲುಕೋಟೆಯಲ್ಲಿ ರಾತ್ರಿ ಹೊತ್ತು ದೀಪಗಳ ಮಧ್ಯೆ ಚಿತ್ರೀಕರಣಗೊಂಡ ಇನ್ನೊಂದು ಹಾಡೂ ಸಹ ಮನ ಗೆಲ್ಲುವಂತಿದೆ.

ಒಟ್ಟಿನಲ್ಲಿ 73-ಶಾಂತಿ ನಿವಾಸ ಮನೆ ಮಂದಿಯೆಲ್ಲ ಕುಳಿತು ಆನಂದಿಸಬಹುದಾದ ಸುಂದರ ಕೌಟುಂಬಿಕ ಚಿತ್ರ.ಇಂತಹ ಸುಂದರ ಚಿತ್ರ ಮೊದಲು ಕನ್ನಡದಲ್ಲಿ ಬರದೇ ಹಿಂದಿಯಲ್ಲಿ ಬಂತಲ್ಲಾ ಎಂಬುದೊಂದೇ ಕೊರಗು. ಆದರೂ ಇದು ಅತ್ಯಂತ ಸುಂದರವಾಗಿ ಕನ್ನಡೀಕರಣಗೊಂಡಿದೆ. ರೀಮೇಕ್, ಸ್ವಮೇಕ್‍ಗಳೆಂಬ ಚರ್ಚೆಯನ್ನು ಬದಿಗೊತ್ತಿ ಎಲ್ಲರೂ ನೋಡಿ ಸವಿಯಬಹುದಾದ ಚಿತ್ರ. 73-ಶಾಂತಿ ನಿವಾಸಕ್ಕೆ ಶುಭವಾಗಲಿ.