Friday 27 July, 2007

ಮುದನೀಡುವ "ಮೀರಾ ಮಾಧವ ರಾಘವ"

ಕಿರುತೆರೆಯ ಜನಪ್ರಿಯ ನಿರ್ದೇಶಕ ಟಿ.ಎನ್.ಸೀತಾರಾಂ ನಿರ್ದೇಶನದ ಹಿರಿತೆರೆಯ ಚಿತ್ರ ಮೀರಾ ಮಾಧವ ರಾಘವ ನೋಡಲು ಇಂದು ಪಿ.ವಿ.ಆರ್ ಗೆ 4.20 ರ ಆಟಕ್ಕೆ ಹೋಗಿದ್ದೆ. ಚಿತ್ರಮಂದಿರ ಭಾಗಶಃ ತುಂಬಿತ್ತು. ಕಿರುತೆರೆಯ ಕೆಲವು ಕಲಾವಿದರೂ ಸಹ ಸಿನಿಮಾ ನೋಡಲು ಬಂದಿದ್ದರು.

ಚಿತ್ರ ಅತ್ಯದ್ಭುತವಲ್ಲದಿದ್ದರೂ ಒಂದು ಉತ್ತಮ ಸಾಂಸಾರಿಕ ಚಿತ್ರವಾಗಿ ಮೂಡಿಬಂದಿದೆ. ಮಧ್ಯಮ ವರ್ಗದ ಹೆಣ್ಣು ಮಗಳೊಬ್ಬಳ ಜೀವನದಲ್ಲಿ ನಡೆಯುವ ಸಂಘರ್ಷದ ಕಥೆಯನ್ನು ಸೀತಾರಾಂ ಸಮರ್ಥವಾಗಿ ನಿರೂಪಿಸಿದ್ದಾರೆ. ಕಥೆಯ ವಿಚಾರಕ್ಕೆ ಬರೋಣ. ಮೀರಾ-ಮಾಧವ-ರಾಘವ ಮೂರು ಪಾತ್ರಗಳು. ಮೀರಾ (ರಮ್ಯಾ) ಮಧ್ಯಮ ವರ್ಗದ ಹುಡುಗಿ. ಈಕೆ ಗಾಯಕಿ ಕೂಡ. ಈಕೆಯನ್ನು ರಾಘವ ಎಂಬ ಶ್ರೀಮಂತ ರೌಡಿ (ತಿಲಕ್) ಇಷ್ಟಪಡುತ್ತಾನೆ ಮತ್ತು ಮದುವೆಯಾಗುವಂತೆ ಪೀಡಿಸುತ್ತಾನೆ. ಆದರೆ ರೌಡಿಗೆ ಮಗಳನ್ನು ಕೊಡಲೊಪ್ಪದ ಮೀರಾಳ ಹೆತ್ತವರು ಆಕೆಯ ಮದುವೆಯನ್ನು ಮಾಧವನೆಂಬ (ದಿಗಂತ್) ಕಾಲೇಜು ಉಪನ್ಯಾಸಕನ ಜೊತೆ ನಡೆಸುತ್ತಾರೆ. ಬಡಕುಟುಂಬಕ್ಕೆ ಸೇರಿದ ಮಾಧವನಿಗೆ ಐ.ಎ.ಎಸ್. ಅಧಿಕಾರಿಯಾಗುವ ಆಸೆ. ಆದರೆ ಆರ್ಥಿಕವಾಗಿ ಸಶಕ್ತನಾಗಿರದ ಕಾರಣ ಆಸೆ ಆಸೆಯಾಗಿಯೇ ಉಳಿದಿರುತ್ತದೆ. ಹೀಗಿರುವಾಗ ಗಂಡನ ಐ.ಎ.ಎಸ್. ಆಸೆಯನ್ನು ಪೂರೈಸಲು ಬಯಸುವ ಮೀರಾ ಅನಿವಾರ್ಯ ಕಾರಣಗಳಿಂದ ರಾಘವನ ಬಳಿ ೧೦ ಲಕ್ಷ ಸಾಲ ಪಡೆಯುತ್ತಾಳೆ. ಸಾಲ ಮಾಡಲು ವಿರೋಧಿಯಾಗಿರುವ ಮಾಧವನಲ್ಲಿ ಈ ವಿಚಾರವನ್ನು ಮುಚ್ಚಿಡುತ್ತಾಳೆ. ಇಲ್ಲಿಂದ ಮೀರಾಳ ಬದುಕಿನಲ್ಲಿ ಮತ್ತೊಮ್ಮೆ ರಾಘವನ ಪ್ರವೇಶವಾಗುತ್ತದೆ. ಮೀರಾಳ ಸುಂದರ ಜೀವನದಲ್ಲಿ ಆತಂಕದ ಬಿರುಗಾಳಿಯೇಳುತ್ತದೆ. ತನ್ನ ಜೀವನದಲ್ಲಿ ತಲೆದೋರುವ ಈ ಸಂಕಟಗಳನ್ನು ಮೀರಾ ಹೇಗೆ ಎದುರಿಸುತ್ತಾಳೆ... ಮಾಧವನಿಗೆ ಸತ್ಯದ ಅರಿವಾದಾಗ ಹೇಗೆ ಪ್ರತಿಕ್ರಿಯಿಸುತ್ತಾನೆ... ಎಂಬುದನ್ನು ಸೀತಾರಾಂ ತಮ್ಮದೇ ಶೈಲಿಯಲ್ಲಿ ನಿರೂಪಿಸಿದ್ದಾರೆ.

ನಿರ್ದೇಶನದ ಜೊತೆಗೆ ಕಥೆ-ಚಿತ್ರಕಥೆ-ಸಂಭಾಷಣೆಗಳ ಜವಾಬ್ದಾರಿಯನ್ನೂ ಸೀತಾರಾಂರವರೇ ನಿಭಾಯಿಸಿದ್ದಾರೆ. ಸಂಭಾಷಣೆಯಲ್ಲಿ ಸೀತಾರಾಂ ಮಿಂಚಿದ್ದಾರೆ. ಚಿತ್ರಕಥೆ ಬಿಗುವಾಗಿದ್ದು ಎಲ್ಲಿಯೂ ಹಳಿತಪ್ಪದಂತೆ ಸೀತಾರಾಂ ಎಚ್ಚರವಹಿಸಿದ್ದಾರೆ. ಆದರೂ ಕೆಲವೊಂದು ಕಡೆಗಳಲ್ಲಿ ಸ್ವಲ್ಪ ಎಳೆದಂತೆ ಕಂಡುಬಂದು ಬೇಸರತರಿಸುತ್ತದೆ. ಹಾಸ್ಯದ ಸನ್ನಿವೇಶಗಳೇ ವಿರಳ.. ಇರುವ ಕಡೆಗಳಲ್ಲೂ ಹಾಸ್ಯ ಅಂತಹ ನಗುವನ್ನೇನೂ ತರಿಸುವುದಿಲ್ಲ. ಒಂದೆರಡು ಸನ್ನಿವೇಶಗಳು, ಸಂಭಾಷಣೆಗಳಲ್ಲಿ ಸೀತಾರಾಂ ಪ್ರಯತ್ನ ಸಾಲದು.ಇನ್ನಷ್ಟು ಉತ್ತಮವಾಗಿ ತೆಗೆಯಬಹುದಾಗಿತ್ತು ಎಂದು ಅನಿಸಿದರೆ ಆಶ್ಚರ್ಯವಿಲ್ಲ.

ತಮ್ಮ ಇಂಪಾದ ಸಂಗೀತ-ಸಾಹಿತ್ಯದಿಂದ ಹಂಸಲೇಖಾ ಚಿತ್ರಕ್ಕೆ ಇನ್ನಷ್ಟು ಮೆರುಗನ್ನು ಕೊಟ್ಟಿದ್ದಾರೆ. ಹಾಡುಗಳ ಚಿತ್ರೀಕರಣವೂ ಪರವಾಗಿಲ್ಲ. ಹಿನ್ನೆಲೆ ಗಾಯಕಿಯರು ನಿಜವಾಗಿಯೂ ಉತ್ತಮವಾಗಿ ಹಾಡಿದ್ದಾರೆ.

ಅಭಿನಯದಲ್ಲಿ ರಮ್ಯಾ ಮಿಂಚಿದ್ದಾರೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ರಮ್ಯಾ ಸಮರ್ಥವಾಗಿ ಅಭಿನಯಿಸಿದ್ದಾರೆ. ದಿಗಂತ್ ಅಭಿನಯದಲ್ಲಿ ಇನ್ನೂ ಪಳಗಬೇಕು. ಸಹ ಕಲಾವಿದರಾದ ಸುಧಾ ಬೆಳವಾಡಿ, ಸೀತಾ ಕೋಟೆ, ಮಾಸ್ಟರ್ ಆನಂದ್, ಹರಿಣಿ, ಮಂಡ್ಯ ರಮೇಶ್, ಜಯಶ್ರೀ ಎಲ್ಲರೂ ತಮಗಿರುವ ಅಲ್ಪಾವಕಾಶದಲ್ಲಿಯೇ ಸಹಜವಾಗಿ ನಟಿಸಿ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯವೊದಗಿಸಿದ್ದಾರೆ. ಬಹುತೇಕ ಎಲ್ಲರೂ ಕಿರುತೆರೆಯ ಕಲಾವಿದರುಗಳೆ ಅಭಿನಯಿಸಿರುವುದು ಇನ್ನೊಂದು ವಿಶೇಷ. ಆದರೆ ಚಿತ್ರದ ನಿಜವಾದ ನಾಯಕ ನಮ್ಮ ರಾಘವನೆಂದರೆ ತಪ್ಪಾಗಲಾರದು. ತಿಲಕ್ ಅಭಿನಯದ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆಯೇ. ಖಳನಾಯಕನಾಗಿದ್ದರೂ ಚಿತ್ರದ ಅಂತ್ಯದಲ್ಲಿ ನಿಮಗೆ ಇಷ್ಟವಾಗುವುದು ರಾಘವನೇ ಹೊರತು ಮಾಧವನಲ್ಲ. ತಮ್ಮ ಹಾವ ಭಾವ, ಸಂಭಾಷಣೆಯೊನ್ನೊಪ್ಪಿಸುವ ರೀತಿಗಳಿಂದ ಇಡೀ ಚಿತ್ರವನ್ನು ಆವರಿಸಿ ಬಿಡುತ್ತಾರೆ.. ಮೀರಾ ರಾಘವನಿಗೇ ಸಿಗಬಾರದಿತ್ತೇ ಎಂಬಷ್ಟರ ಮಟ್ಟಿಗೆ ರಾಘವನ ಪಾತ್ರ ಆಪ್ತವಾಗಿಬಿಡುತ್ತದೆ. HATS OFF TILAK. ಕನ್ನಡಕ್ಕೆ ಮತ್ತೊಬ್ಬ ಯೋಗ್ಯ ನಟನ ಸೇರ್ಪಡೆಯಾಗಿದೆ.


ಒಟ್ಟಿನಲ್ಲಿ ಇದೊಂದು ಸದಭಿರುಚಿಯ, ಯಾವುದೇ ಅಶ್ಲೀಲತೆ, ಹಿಂಸೆ, ರಕ್ತಪಾತಗಳಿಲ್ಲದ ಸುಂದರ ಸಾಂಸಾರಿಕ ಚಿತ್ರ. ಆದರೆ ಇದನ್ನು ಗೆಲ್ಲಿಸಬೇಕಾದರೆ ಮನೆಗಳಲ್ಲಿ ದೈನಂದಿನ ಧಾರಾವಾಹಿಗಳಿಗೆ ಅಂಟಿಕೊಂಡಿರುವ ಮಹಿಳಾ ಮಣಿಗಳು ಮತ್ತು ಕುಟುಂಬಗಳು ಥಿಯೇಟರ್ ಕಡೆಗೆ ಪಯಣಿಸಬೇಕು. ಮಾಸ್ ಚಿತ್ರಪ್ರಿಯರಿಗೆ ಚಿತ್ರ ಇಷ್ಟವಾಗದೇ ಇರಬಹುದು. ಆದರೂ ಇದು ನಮ್ಮ ಚಿತ್ರ. ಕಲಾವಿದರೆಲ್ಲರೂ ನಮ್ಮವರು. ಇಂತಹ ಚಿತ್ರ ಗೆಲ್ಲಬೇಕು. ಗೆಲ್ಲಿಸುವ ಹೊಣೆ ನಮ್ಮೆಲ್ಲ ಕನ್ನಡಿಗರದ್ದು.

No comments: