Saturday, 28 July 2007
One of my fav songs...
ನೆಕ್ಸ್ಟ್ ಟೈಂ ನಿನ್ನ ನೋಡಿದಾಗ ಮನಸು ನನ್ನ ಬಿಟ್ಟು ನಿನ್ನ ಸೇರಿತು
ಎವರಿಟೈಂ ನಿನ್ನ ನಾ ನೋಡಿದಾಗ... ಮರ್ತೆನು ನನ್ನೆ ಮೆಲ್ಲ
ಸದ್ದೆ ಇಲ್ಲದೆ, ನಿದ್ದೆ ಇಲ್ಲದೆ ಒದ್ದಾಡೊ ಹಾಗೆ ಮಾಡಿದೆ
ಕದ್ದು ನೋಡಿದೆ, ಮುದ್ದು ಮಾಡಿದೆ ಎದ್ದಾಗ ಎಲ್ಲಿ ಓಡಿದೆ
ಸದ್ದೆ ಇಲ್ಲದೆ, ನಿದ್ದೆ ಇಲ್ಲದೆ ಒದ್ದಾಡೊ ಹಾಗೆ ಮಾಡಿದೆ
ಕದ್ದು ನೋಡಿದೆ, ಮುದ್ದು ಮಾಡಿದೆ ಎದ್ದಾಗ ಎಲ್ಲಿ ಓಡಿದೆ
ಕನ್ನಡಿ ಮುಂದೆ ನಾ ನಿಂತರೂನೂ, ಕಾಣುವೆ ನಂಗೆ ನೀನು. || ಫಸ್ಟ್ ಟೈಂ ||
ಎಲ್ಲೆ ಇದ್ದರೂ, ಎಲ್ಲೆ ಹೋದರೂ ಅಲ್ಲೆ ಬಂದು ಹಲ್ಲೆ ಮಾಡಿದೆ
ಸುಳ್ಳೆ ಆದರೂ, ಒಲ್ಲೆ ಎಂದರೂ ಲಲ್ಲೆ ಗರೆದು ಮಲ್ಲೆ ಮುಡಿಸಿದೆ
ಎಲ್ಲೆ ಇದ್ದರೂ, ಎಲ್ಲೆ ಹೋದರೂ ಅಲ್ಲೆ ಬಂದು ಹಲ್ಲೆ ಮಾಡಿದೆ
ಸುಳ್ಳೆ ಆದರೂ, ಒಲ್ಲೆ ಎಂದರೂ ಲಲ್ಲೆ ಗರೆದು ಮಲ್ಲೆ ಮುಡಿಸಿದೆ
ಕಂಡೆನೂ ನಿನ್ನನೇ ಟಿ.ವಿ.ಯಲ್ಲಿ... ಎಲ್ಲ ಚಾನೆಲ್ಲಿನಲ್ಲಿ... || ಫಸ್ಟ್ ಟೈಂ ||
Friday, 27 July 2007
ಮುದನೀಡುವ "ಮೀರಾ ಮಾಧವ ರಾಘವ"
ಚಿತ್ರ ಅತ್ಯದ್ಭುತವಲ್ಲದಿದ್ದರೂ ಒಂದು ಉತ್ತಮ ಸಾಂಸಾರಿಕ ಚಿತ್ರವಾಗಿ ಮೂಡಿಬಂದಿದೆ. ಮಧ್ಯಮ ವರ್ಗದ ಹೆಣ್ಣು ಮಗಳೊಬ್ಬಳ ಜೀವನದಲ್ಲಿ ನಡೆಯುವ ಸಂಘರ್ಷದ ಕಥೆಯನ್ನು ಸೀತಾರಾಂ ಸಮರ್ಥವಾಗಿ ನಿರೂಪಿಸಿದ್ದಾರೆ. ಕಥೆಯ ವಿಚಾರಕ್ಕೆ ಬರೋಣ. ಮೀರಾ-ಮಾಧವ-ರಾಘವ ಮೂರು ಪಾತ್ರಗಳು. ಮೀರಾ (ರಮ್ಯಾ) ಮಧ್ಯಮ ವರ್ಗದ ಹುಡುಗಿ. ಈಕೆ ಗಾಯಕಿ ಕೂಡ. ಈಕೆಯನ್ನು ರಾಘವ ಎಂಬ ಶ್ರೀಮಂತ ರೌಡಿ (ತಿಲಕ್) ಇಷ್ಟಪಡುತ್ತಾನೆ ಮತ್ತು ಮದುವೆಯಾಗುವಂತೆ ಪೀಡಿಸುತ್ತಾನೆ. ಆದರೆ ರೌಡಿಗೆ ಮಗಳನ್ನು ಕೊಡಲೊಪ್ಪದ ಮೀರಾಳ ಹೆತ್ತವರು ಆಕೆಯ ಮದುವೆಯನ್ನು ಮಾಧವನೆಂಬ (ದಿಗಂತ್) ಕಾಲೇಜು ಉಪನ್ಯಾಸಕನ ಜೊತೆ ನಡೆಸುತ್ತಾರೆ. ಬಡಕುಟುಂಬಕ್ಕೆ ಸೇರಿದ ಮಾಧವನಿಗೆ ಐ.ಎ.ಎಸ್. ಅಧಿಕಾರಿಯಾಗುವ ಆಸೆ. ಆದರೆ ಆರ್ಥಿಕವಾಗಿ ಸಶಕ್ತನಾಗಿರದ ಕಾರಣ ಆಸೆ ಆಸೆಯಾಗಿಯೇ ಉಳಿದಿರುತ್ತದೆ. ಹೀಗಿರುವಾಗ ಗಂಡನ ಐ.ಎ.ಎಸ್. ಆಸೆಯನ್ನು ಪೂರೈಸಲು ಬಯಸುವ ಮೀರಾ ಅನಿವಾರ್ಯ ಕಾರಣಗಳಿಂದ ರಾಘವನ ಬಳಿ ೧೦ ಲಕ್ಷ ಸಾಲ ಪಡೆಯುತ್ತಾಳೆ. ಸಾಲ ಮಾಡಲು ವಿರೋಧಿಯಾಗಿರುವ ಮಾಧವನಲ್ಲಿ ಈ ವಿಚಾರವನ್ನು ಮುಚ್ಚಿಡುತ್ತಾಳೆ. ಇಲ್ಲಿಂದ ಮೀರಾಳ ಬದುಕಿನಲ್ಲಿ ಮತ್ತೊಮ್ಮೆ ರಾಘವನ ಪ್ರವೇಶವಾಗುತ್ತದೆ. ಮೀರಾಳ ಸುಂದರ ಜೀವನದಲ್ಲಿ ಆತಂಕದ ಬಿರುಗಾಳಿಯೇಳುತ್ತದೆ. ತನ್ನ ಜೀವನದಲ್ಲಿ ತಲೆದೋರುವ ಈ ಸಂಕಟಗಳನ್ನು ಮೀರಾ ಹೇಗೆ ಎದುರಿಸುತ್ತಾಳೆ... ಮಾಧವನಿಗೆ ಸತ್ಯದ ಅರಿವಾದಾಗ ಹೇಗೆ ಪ್ರತಿಕ್ರಿಯಿಸುತ್ತಾನೆ... ಎಂಬುದನ್ನು ಸೀತಾರಾಂ ತಮ್ಮದೇ ಶೈಲಿಯಲ್ಲಿ ನಿರೂಪಿಸಿದ್ದಾರೆ.
ನಿರ್ದೇಶನದ ಜೊತೆಗೆ ಕಥೆ-ಚಿತ್ರಕಥೆ-ಸಂಭಾಷಣೆಗಳ ಜವಾಬ್ದಾರಿಯನ್ನೂ ಸೀತಾರಾಂರವರೇ ನಿಭಾಯಿಸಿದ್ದಾರೆ. ಸಂಭಾಷಣೆಯಲ್ಲಿ ಸೀತಾರಾಂ ಮಿಂಚಿದ್ದಾರೆ. ಚಿತ್ರಕಥೆ ಬಿಗುವಾಗಿದ್ದು ಎಲ್ಲಿಯೂ ಹಳಿತಪ್ಪದಂತೆ ಸೀತಾರಾಂ ಎಚ್ಚರವಹಿಸಿದ್ದಾರೆ. ಆದರೂ ಕೆಲವೊಂದು ಕಡೆಗಳಲ್ಲಿ ಸ್ವಲ್ಪ ಎಳೆದಂತೆ ಕಂಡುಬಂದು ಬೇಸರತರಿಸುತ್ತದೆ. ಹಾಸ್ಯದ ಸನ್ನಿವೇಶಗಳೇ ವಿರಳ.. ಇರುವ ಕಡೆಗಳಲ್ಲೂ ಹಾಸ್ಯ ಅಂತಹ ನಗುವನ್ನೇನೂ ತರಿಸುವುದಿಲ್ಲ. ಒಂದೆರಡು ಸನ್ನಿವೇಶಗಳು, ಸಂಭಾಷಣೆಗಳಲ್ಲಿ ಸೀತಾರಾಂ ಪ್ರಯತ್ನ ಸಾಲದು.ಇನ್ನಷ್ಟು ಉತ್ತಮವಾಗಿ ತೆಗೆಯಬಹುದಾಗಿತ್ತು ಎಂದು ಅನಿಸಿದರೆ ಆಶ್ಚರ್ಯವಿಲ್ಲ.
ತಮ್ಮ ಇಂಪಾದ ಸಂಗೀತ-ಸಾಹಿತ್ಯದಿಂದ ಹಂಸಲೇಖಾ ಚಿತ್ರಕ್ಕೆ ಇನ್ನಷ್ಟು ಮೆರುಗನ್ನು ಕೊಟ್ಟಿದ್ದಾರೆ. ಹಾಡುಗಳ ಚಿತ್ರೀಕರಣವೂ ಪರವಾಗಿಲ್ಲ. ಹಿನ್ನೆಲೆ ಗಾಯಕಿಯರು ನಿಜವಾಗಿಯೂ ಉತ್ತಮವಾಗಿ ಹಾಡಿದ್ದಾರೆ.
ಅಭಿನಯದಲ್ಲಿ ರಮ್ಯಾ ಮಿಂಚಿದ್ದಾರೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ರಮ್ಯಾ ಸಮರ್ಥವಾಗಿ ಅಭಿನಯಿಸಿದ್ದಾರೆ. ದಿಗಂತ್ ಅಭಿನಯದಲ್ಲಿ ಇನ್ನೂ ಪಳಗಬೇಕು. ಸಹ ಕಲಾವಿದರಾದ ಸುಧಾ ಬೆಳವಾಡಿ, ಸೀತಾ ಕೋಟೆ, ಮಾಸ್ಟರ್ ಆನಂದ್, ಹರಿಣಿ, ಮಂಡ್ಯ ರಮೇಶ್, ಜಯಶ್ರೀ ಎಲ್ಲರೂ ತಮಗಿರುವ ಅಲ್ಪಾವಕಾಶದಲ್ಲಿಯೇ ಸಹಜವಾಗಿ ನಟಿಸಿ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯವೊದಗಿಸಿದ್ದಾರೆ. ಬಹುತೇಕ ಎಲ್ಲರೂ ಕಿರುತೆರೆಯ ಕಲಾವಿದರುಗಳೆ ಅಭಿನಯಿಸಿರುವುದು ಇನ್ನೊಂದು ವಿಶೇಷ. ಆದರೆ ಚಿತ್ರದ ನಿಜವಾದ ನಾಯಕ ನಮ್ಮ ರಾಘವನೆಂದರೆ ತಪ್ಪಾಗಲಾರದು. ತಿಲಕ್ ಅಭಿನಯದ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆಯೇ. ಖಳನಾಯಕನಾಗಿದ್ದರೂ ಚಿತ್ರದ ಅಂತ್ಯದಲ್ಲಿ ನಿಮಗೆ ಇಷ್ಟವಾಗುವುದು ರಾಘವನೇ ಹೊರತು ಮಾಧವನಲ್ಲ. ತಮ್ಮ ಹಾವ ಭಾವ, ಸಂಭಾಷಣೆಯೊನ್ನೊಪ್ಪಿಸುವ ರೀತಿಗಳಿಂದ ಇಡೀ ಚಿತ್ರವನ್ನು ಆವರಿಸಿ ಬಿಡುತ್ತಾರೆ.. ಮೀರಾ ರಾಘವನಿಗೇ ಸಿಗಬಾರದಿತ್ತೇ ಎಂಬಷ್ಟರ ಮಟ್ಟಿಗೆ ರಾಘವನ ಪಾತ್ರ ಆಪ್ತವಾಗಿಬಿಡುತ್ತದೆ. HATS OFF TILAK. ಕನ್ನಡಕ್ಕೆ ಮತ್ತೊಬ್ಬ ಯೋಗ್ಯ ನಟನ ಸೇರ್ಪಡೆಯಾಗಿದೆ.
ಒಟ್ಟಿನಲ್ಲಿ ಇದೊಂದು ಸದಭಿರುಚಿಯ, ಯಾವುದೇ ಅಶ್ಲೀಲತೆ, ಹಿಂಸೆ, ರಕ್ತಪಾತಗಳಿಲ್ಲದ ಸುಂದರ ಸಾಂಸಾರಿಕ ಚಿತ್ರ. ಆದರೆ ಇದನ್ನು ಗೆಲ್ಲಿಸಬೇಕಾದರೆ ಮನೆಗಳಲ್ಲಿ ದೈನಂದಿನ ಧಾರಾವಾಹಿಗಳಿಗೆ ಅಂಟಿಕೊಂಡಿರುವ ಮಹಿಳಾ ಮಣಿಗಳು ಮತ್ತು ಕುಟುಂಬಗಳು ಥಿಯೇಟರ್ ಕಡೆಗೆ ಪಯಣಿಸಬೇಕು. ಮಾಸ್ ಚಿತ್ರಪ್ರಿಯರಿಗೆ ಚಿತ್ರ ಇಷ್ಟವಾಗದೇ ಇರಬಹುದು. ಆದರೂ ಇದು ನಮ್ಮ ಚಿತ್ರ. ಕಲಾವಿದರೆಲ್ಲರೂ ನಮ್ಮವರು. ಇಂತಹ ಚಿತ್ರ ಗೆಲ್ಲಬೇಕು. ಗೆಲ್ಲಿಸುವ ಹೊಣೆ ನಮ್ಮೆಲ್ಲ ಕನ್ನಡಿಗರದ್ದು.
Wednesday, 18 July 2007
ಮೀರಾ ಮಾಧವ ರಾಘವ ಹಾಡುಗಳು
ಟಿ. ಎನ್. ಸೀತಾರಾಂ ನಿರ್ದೇಶನದ ಬಹು ನಿರೀಕ್ಷಿತ ಮೀರಾ ಮಾಧವ ರಾಘವ ಚಿತ್ರದ ಹಾಡುಗಳು ಹಂಸಲೇಖರವರ ಸಾರಥ್ಯದಲ್ಲಿ ಸೊಗಸಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಎಲ್ಲವನ್ನೂ ಕನ್ನಡಿಗರೇ ಹಾಡಿರುವುದು ವಿಶೇಷ.
೧. ವಸಂತ ವಸಂತ (ರಾಜೇಶ್ ಕೃಷ್ಣನ್, ಅನುರಾಧಾ ಭಟ್ (ಎದೆ ತುಂಬಿ ಹಾಡುವೆನು ಗಾಯಕಿ!!!) ) : ಇದು ತುಂಬ ಮೆಲೋಡಿಯಸ್ ಹಾಡು. ಕಿವಿಗೆ ಬಹಳ ಇಂಪನ್ನು ಕೊಡುತ್ತದೆ. ನನ್ನ ಫೇವರಿಟ್
೨. ಒಳ್ಳೆ ಟೈಂ ಬಂತಮ್ಮ (ಹೇಮಂತ್, ಸುಪ್ರಿಯಾ ಆಚಾರ್ಯ, ಇಂದು ನಾಗರಾಜ್ ಲಕ್ಷ್ಮಿ ನಾರಾಜ್ (ಎದೆ ತುಂಬಿ ಹಾಡುವೆನು ಗಾಯಕಿಯರು ಕಂ ಸೋದರಿಯರು. !!!) ) - ಇದೊಂದು ಚೌ ಚೌ ಹಾಡು. ಅನೇಕ ಜನಪ್ರಿಯ ಹಳೆಯ ಚಿತ್ರಗೀತೆಗಳ ರೀಮಿಕ್ಸ್ ಆಗಿರೋದ್ರಿಂದ ಕೇಲಲು ಸೊಗಸಾಗಿದೆ.
೩. ನಿನ್ನ ನೆನಪೆ - (ಸುಪ್ರಿಯಾ ಆಚಾರ್ಯ, ಫಯಾಜ್ ಖಾನ್) - ಶಾಸ್ತ್ರೀಯ ಸಂಗೀತ ಶೈಲಿಯ ಹಾಡು. ಸಾಹಿತ್ಯ, ಸಂಗೀತ ಎರಡರಲ್ಲೊ ಹಂಸಲೇಖ ಮಿಂಚಿದ್ದಾರೆ. ಉತ್ತಮ ಹಾಡು.
೪. ಬೆಳ್ಳುಳ್ಳವ್ವ ಬೆಳ್ಳುಳ್ಳಿ - (ಚೈತ್ರಾ) - ಲಯ ಪ್ರಧಾನ ಹಾಡು. ಚೈತ್ರ ಚೆನ್ನಾಗಿ ಹಾಡಿದ್ದಾರೆ. ಐಟಂ ನಂಬರ್ ಥರ ಇದೆ!!! ಟಿ.ಎನ್. ಸೀತಾರಾಂ ಇರನ್ನು ಹೇಗೆ ಚಿತ್ರೀಕರಿಸಿದ್ದಾರೆ ಅನ್ನೋದನ್ನು ನೋಡಬೇಕು.
೫. ಭೂಮಿ ಬಾನು - (ಅನುರಾಧಾ ಭಟ್) - ಬಹಳ ಇಂಪಾದ ಗೀತೆ.ನನ್ನ ಎರಡನೇ ಫೇವರಿಟ್
೬. ರಾಧೆಯ ನೋಡಲು ಬಂದೆ - (ಹರ್ಷ, ಅನುರಾಧಾ ಭಟ್) - ನಾಯಕಿ ನಾಯಕನಿಗೆ ಸಂಗೀತ ಹೇಳಿಕೊಡುವ ಚಿಕ್ಕ ಹಾಡು.
ನನ್ನ ಒಟ್ಟು ಅಂಕ - 4/5
ಎದೆ ತುಂಬಿ ಹಾಡುವೆನು ಟಿ.ವಿ. ಕಾರ್ಯಕ್ರಮದಲ್ಲಿ ಹೊರಹೊಮ್ಮಿದ ಮಂಗಳೂರಿನ ಅನುರಾಧಾ ಭಟ್, ಮೈಸೂರಿನ ಸೋದರಿಯರಾದ ಇಂದು ನಾಗರಾಜ್ ಮತ್ತು ಲಕ್ಷ್ಮಿ ನಾಗರಾಜ್ ಅವರುಗಳಿಗೆ ಹಾಡಲು ಅವಕಾಶ ಕೊಟ್ಟ ಹಂಸಲೇಖ ಕ್ರಮ ಶ್ಲಾಘನೀಯ.
Monday, 16 July 2007
ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!
Friday, 13 July 2007
ಪುಟ್ಟಣ್ಣ ಕಣಗಾಲ್ ಚಿತ್ರಗಳು
ಪುಟ್ಟಣ್ಣನವರ ಒಂದೊಂದು ಚಿತ್ರವೂ ಒಂದೊಂದು ಅನರ್ಘ್ಯ ರತ್ನವಿದ್ದಂತೆ.
ಪುಟ್ಟಣ್ಣನವರ ನಿರ್ದೇಶನದ ಚಿತ್ರಗಳನ್ನು ಮತ್ತೊಮ್ಮೆ ನೆನೆದು ಹೆಮ್ಮೆ ಪಡೋಣ........
ಕನ್ನಡ ಚಿತ್ರಗಳು
0 - ಬೆಟ್ಟದ ಹಾದಿ (ಬಿಡುಗಡೆಯಾಗಿಲ್ಲ)
1 ಬೆಳ್ಳಿಮೋಡ - (1966 - ಕಲ್ಪನಾ, ಕಲ್ಯಾಣ್ ಕುಮಾರ್)
2 ಮಲ್ಲಮ್ಮನ ಪವಾಡ (1969 - ಡಾ.ರಾಜ್ ಕುಮಾರ್, ಬಿ.ಸರೋಜಾ ದೇವಿ)
3 ಕಪ್ಪು ಬಿಳುಪು (1969 - ಕಲ್ಪನಾ)
4 ಗೆಜ್ಜೆ ಪೂಜೆ (1969 - (ಕಲ್ಪನಾ, ಗಂಗಾಧರ್, ಲೀಲಾವತಿ)
5 ಕರುಳಿನ ಕರೆ (1970 - ಡಾ.ರಾಜ್ ಕುಮಾರ್, ಕಲ್ಪನಾ)
6 ಸಾಕ್ಷಾತ್ಕಾರ (1971 - ಡಾ.ರಾಜ್ ಕುಮಾರ್, ಜಮುನ, ಪೃಥ್ವಿ ರಾಜ್ ಕಪೂರ್)
7 ಶರಪಂಜರ (1971 - ಕಲ್ಪನಾ, ಗಂಗಾಧರ್)
8 ನಾಗರ ಹಾವು (1972 - ವಿಷ್ಣುವರ್ಧನ್, ಆರತಿ, ಕೆ.ಎಸ್.ಅಶ್ವಥ್, ಜಯಂತಿ)
9 ಎಡಕಲ್ಲು ಗುಡ್ಡದ ಮೇಲೆ (1973 - ಜಯಂತಿ, ಆರತಿ, ಚಂದ್ರಶೇಖರ್)
10 ಉಪಾಸನೆ(1974 - ಆರತಿ, ಸೀತಾರಾಂ)
11 ಕಥಾ ಸಂಗಮ (1975 - ರಜನೀಕಾಂತ್, ಆರತಿ, ಬಿ.ಸರೋಜಾ ದೇವಿ)
12 ಶುಭ ಮಂಗಳ(1975 - ಶ್ರೀನಾಥ್, ಆರತಿ, ಅಂಬರೀಶ್, ಶಿವರಾಂ)
13 ಬಿಳಿ ಹೆಂಡ್ತಿ (1975 - ಆರತಿ, ಅನಿಲ್ ಕುಮಾರ್)
14 ಫಲಿತಾಂಶ(1976 -ಆರತಿ, ಜೈ ಜಗದೀಶ್)
15 ಕಾಲೇಜು ರಂಗ (1976 - ಕಲ್ಯಾಣ್ ಕುಮಾರ್, ಜಯಸಿಂಹ, ಲೋಕನಾಥ್, ಲೀಲಾವತಿ)
16 ಪಡುವಾರ ಹಳ್ಳಿ ಪಾಂಡವರು (1978 - ಅಂಬರೀಶ್, ಜೈ ಜಗದೀಶ್, ರಾಮಕೃಷ್ಣ, ಆರತಿ)
17 ಧರ್ಮಸೆರೆ (1979 - ಶ್ರೀನಾಥ್, ಆರತಿ)
18 ರಂಗನಾಯಕಿ (1981 - ಆರತಿ, ಅಶೋಕ್, ರಾಮಕೃಷ್ಣ, ಅಂಬರೀಶ್, ರಾಜಾನಂದ್)
19 ಮಾನಸ ಸರೋವರ (1983 - ಶ್ರೀನಾಥ್, ರಾಮಕೃಷ್ಣ, ಪದ್ಮಾವಾಸಂತಿ)
20 ಧರಣಿ ಮಂಡಲ ಮಧ್ಯದೊಳಗೆ (1983 - ಶ್ರೀನಾಥ್, ಚಂದ್ರಶೇಖರ್, ರಾಮಕೃಷ್ಣ, ಟಿ.ಎನ್.ಸೀತಾರಾಂ)
21 ಅಮೃತ ಘಳಿಗೆ (1984 - ಶ್ರೀಧರ್, ಪದ್ಮಾವಾಸಂತಿ, ರಾಮಕೃಷ್ಣ)
22 ಋಣ ಮುಕ್ತಳು(1984 - ಭಾರತಿ, ಎಸ್.ಕೆ.ಅರಸ್,ರಾಮಕೃಷ್ಣ)
23 ಮಸಣದ ಹೂವು (1984 - ಅಂಬರೀಶ್, ಜಯಂತಿ, ಅಪರ್ಣಾ)
24 ಸಾವಿರ ಮೆಟ್ಟಿಲು (1967/2006 - ಕಲ್ಯಾಣ್ ಕುಮಾರ್, ವಜ್ರಮುನಿ, ಜಯಂತಿ, ಪಂಡರಿ ಬಾಯಿ, ಅಂಬರೀಶ್, ಅನು ಪ್ರಭಾಕರ್, ರಾಮಕೃಷ್ಣ, ಸುಂದರ್ ರಾಜ್, ಮಾ.ಹಿರಣ್ಣಯ್ಯ)
(1967 ರಲ್ಲಿ ಆರಂಭಗೊಂಡು ಅರ್ಧಕ್ಕೇ ನಿಂತಿದ್ದ ಚಿತ್ರವನ್ನು 38 ವರ್ಷಗಳ ನಂತರ ಅಂದರೆ, 2006ರಲ್ಲಿ ಕೆ.ಎಸ್.ಎಲ್.ಸ್ವಾಮಿ ಅವರಿಂದ ಪೂರ್ಣಗೊಳಿಸಿದರು)
ಹಿಂದಿ ಚಿತ್ರಗಳು 1. ಝಹ್ರೀಲಾ ಇನ್ಸಾನ್ (1974 - ರಿಶಿ ಕಪೂರ್, ನೀತು ಸಿಂಗ್; ನಾಗರ ಹಾವು ಚಿತ್ರದ ರೀಮೇಕ್)
2. ಹಂ ಪಾಂಚ್ (1981 - ಮಿಥುನ್ ಚಕ್ರವರ್ತಿ; ಪಡುವಾರಹಳ್ಳಿ ಪಾಂಡವರು ಚಿತ್ರದ ರೀಮೇಕ್)
ತಮಿಳು ಚಿತ್ರಗಳು1. ಇರುಲುಂ ಒಲಿಯಂ
2. ಟೀಚರಮ್ಮಾ ತೇವಿಡಿಯಾ
3. ಸುದರುಂ ಸೂರವಲಿಯುಂ
ಮಲಯಾಳಂ ಚಿತ್ರ1. ಪೂಚಿ ಕಣ್ಣೇ (1966 - ಪುಟ್ಟಣ್ಣನವರ ವೃತ್ತಿ ಜೀವನದ ಮೊದಲ ಚಿತ್ರ!!! .ಇದು ತ್ರಿವೇಣಿಯವರ ಕನ್ನಡ ಕಾದಂಬರಿ "ಬೆಕ್ಕಿನ ಕಣ್ಣು" ಆಧಾರಿತ.)
Sunday, 1 July 2007
ಕನ್ನಡದ ಹೆಸರಲ್ಲಿ ಇಂಗ್ಲೀಷ್ ಕಲಿಕೆ... ಮಾನ್ಯತೆ ರದ್ದು! ಈ ಪರಿಸ್ಥಿತಿಗೆ ಯಾರು ಹೊಣೆ?
ಈ ಎಲ್ಲಾ ಸಮಸ್ಯೆಗಳಿಗೆ ಯಾರು ಹೊಣೆ?
ಆಂಗ್ಲ ಮಾಧ್ಯಮದಲ್ಲಿ ಬೋಧಿಸಿದರೆ ಪೋಷಕರಿಂದ ಹೆಚ್ಚಿನ ಹಣ ಕಿತ್ತುಕೊಳ್ಳಬಹುದೆಂಬ ದುರಾಸೆಗೆ ಬಿದ್ದ ಶಾಲಾ ಆಡಳಿತ ಮಂಡಳಿಯವರೇ?
ಹತ್ತಾರು ವರ್ಷಗಳಿಂದಲೇ ಅವ್ಯಾಹತವಾಗಿ ನಡೆಯುತ್ತಿದ್ದ ಭಾಷಾ ನೀತಿಯ ಉಲ್ಲಂಘನೆಯನ್ನು ಹಣದ ಆಮಿಷಕ್ಕೊಳಗಾಗಿಯೋ ಅಥವಾ ದಿವ್ಯ ನಿರ್ಲಕ್ಷದಿಂದಲೋ ಕಡೆಗಣಿಸಿ ಸುಮ್ಮನೇ ಕುಳಿತ ಕ್ಷೇತ್ರ ಶಿಕ್ಷಣಾಧಿಕಾರಿಗಳೇ?
ಇವೆಲ್ಲಾ ಗೊತ್ತಿದ್ದೂ ಜಾಣ ಕಿವುಡರಂತೆ ವರ್ತಿಸುತ್ತಿದ್ದ ರಾಜಕಾರಣಿಗಳೇ?
ಇಷ್ಟು ವರ್ಷಗಳ ಕಾಲ ಏನೇನೂ ಕ್ರಮ ಕೈಗೊಳ್ಳದೇ ಈಗ ಧಿಡೀರನೆ ಭೀಕರ ಕಾನೂನು ಸಮರಕ್ಕಿಳಿದ ಸರ್ಕಾರವೇ?
ಆಂಗ್ಲ ಮಾಧ್ಯಮದಲ್ಲಿ ಓದಿದರೇನೇ ಹೆಚ್ಚು ಪ್ರತಿಷ್ಠೆ ಹಾಗೂ ಅನುಕೂಲ, ಕನ್ನಡಮಾಧ್ಯಮದಲ್ಲಿ ಕಲಿಯುವುದು ಅವಮಾನ, ನಿಷ್ಪ್ರಯೋಜಕವೆಂದು ತಿಳಿದು ಡೊನೇಷನ್ ಎಷ್ಟಾದರೂ ಸರಿ ಕಲಿಸಿದರೆ ಆಂಗ್ಲ ಮಾಧ್ಯಮದಲ್ಲೇ ಕಲಿಸಬೇಕೆಂದು ಪಟ್ಟು ಹಿಡಿಯುವ ಪೋಷಕವರ್ಗವೇ?
ಕನ್ನಡ ಮಾಧ್ಯಮ ಶಾಲೆಗಳ ಅದರಲ್ಲೂ ಸರ್ಕಾರೀ ಕನ್ನಡ ಶಾಲೆಗಳ ಗುಣಮಟ್ಟದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೇ ಅವುಗಳನ್ನು ದೊಡ್ಡಿಗಳ ಮಟ್ಟಕ್ಕೆ ತಂದಿರುವ ಸರ್ಕಾರವೇ?
ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ದುಬಾರಿ ಆಂಗ್ಲ ಶಾಲೆಗಳಿಗೆ ಕಳುಹಿಸಿ ಹೊರಗಿನಿಂದ ಕನ್ನಡವೇ ಬೇಕು, ಕನ್ನಡವೇ ಸರ್ವಸ್ವವೆಂದು ಒಣ ಭಾಷಣ ಬಿಗಿದು ಉರಿಯುವ ಬೆಂಕಿಕೆ ಇನ್ನಷ್ಟು ತುಪ್ಪ ಸುರಿಯುವ "ಬುದ್ಧಿ ಜೀವಿ"ಗಳೇ?
ಪರಿಹಾರವಿದೆಯೇ?
ಇದು ಚಿಂತನಾರ್ಹ ವಿಷಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆಯ ಜ್ಞಾನ ಅವಶ್ಯಕವೆಂಬುದರಲ್ಲಿ ಎರಡು ಮಾತಿಲ್ಲ. ಸರ್ಕಾರವು ಒಂದನೇಯ ತರಗತಿಯಿಂದಲೇ ಕನ್ನಡ ಮಾಧ್ಯಮ ಶಾಲೆಗಳಲ್ಲೂ ಇಂಗ್ಲೀಷನ್ನು ಒಂದು ವಿಷಯವಾಗಿ ಬೋಧಿಸುವ ನಿರ್ಧಾರಕ್ಕೆ ಬಂದದ್ದು ಶ್ಲಾಘನಾರ್ಹ. ಆದರೆ ಇದೊಂದೇ ಸಾಲದು. ಕನ್ನಡ ಮಾಧ್ಯಮ ಶಾಲೆಗಳ ಅದರಲ್ಲೂ ಸರ್ಕಾರೀ ಶಾಲೆಗಳ ಮೂಲಭೂತ ಸೌಕರ್ಯಗಳ, ಕಲಿಕಾ ಗುಣಮಟ್ಟದ ಸುಧಾರಣೆಯಾಗಬೇಕು. ಖಾಸಗೀ ಆಂಗ್ಲ ಮಾಧ್ಯಮದ ಶಾಲೆಗಳಿಗೆ ತಾವೇನೂ ಕಡಿಮೆಯಿಲ್ಲ. ಅಲ್ಲಿ ಸಿಗುವ ಎಲ್ಲ ಉತ್ಕೃಷ್ಠ ಗುಣಮಟ್ಟದ ಶಿಕ್ಷಣ ಸರ್ಕಾರೀ ಶಾಲೆಗಳಲ್ಲೂ ಲಭ್ಯವೆಂಬುದನ್ನು ಪೋಷಕರಿಗೆ ಮನದಟ್ಟಾಗುವಂತೆ ಶಾಲೆಗಳ ಅಭಿವೃದ್ಧಿಯಾಗಬೇಕಿದೆ. ಹಾಗಾದಾಗ ಕೇವಲ ಕೆವವೊಂದೇ ಶಾಲೆಗಳಿಗೆ ಅಂಟಿಕೊಂಡಿರುವ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಲು ಹಿಂಜರಿಯುವುದಿಲ್ಲ. ಇದರಿಂದ ದುಬಾರಿ ಡೊನೇಷನ್ ಹಾವಳಿಯನ್ನೂ ತಪ್ಪಿಸಬಹುದು. ಅಲ್ಲದೇ ಗುಣಮಟ್ಟದ ಶಿಕ್ಷಣದ ಹೆಸರಲ್ಲಿ ಹೆಚ್ಚಿಗೆ ಹಣವನ್ನು ಕಿತ್ತುಕೊಳ್ಳುವ ಧನ ದಾಹೀ ಆಡಳಿತ ಮಂಡಳಿಯವರಿಗೂ ಕಡಿವಾಣಹಾಕಬಹುದು. ಎಲ್ಲಿ ಬೇಡಿಕೆ ಕುಸಿಯುತ್ತದೋ, ಆವಾಗ ತನ್ನಿಂತಾನೇ ಭಾಷಾ ನೀತಿಯ ಪಾಲನೆಯೂ ಆಗುತ್ತದೆ.
ನನ್ನ ಪ್ರಕಾರ ಪ್ರಸಕ್ತ ಸಮಸ್ಯೆಗೆ ಸರ್ಕಾರ, ಪೋಷಕರು, ಶಿಕ್ಷಣಾಧಿಕಾರಿಗಳು, ರಾಜ ಕಾರಣಿಗಳು, ಶಾಲಾ ಆಡಳಿತ ವರ್ಗದವರೆಲ್ಲರೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಹೊಣೆಯಾಗುತ್ತಾರೆ. ಅವರೆಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನರಿತು ಸೂಕ್ತವಾದ ಕ್ರಮ ಕೈಗೊಂಡರೆ ಮುಗ್ಧ ಕಂದಮ್ಮಗಳ ಭವಿಷ್ಯದ ಮೇಲಾಗುವ ಪರಿಣಾಮಗಳನ್ನು ತಪ್ಪಿಸಬಹುದು.
ತಾವು ಏನಂತೀರಿ??...